ಬೀಜಿಂಗ್: ಕೋವಿಡ್-19 ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕ-ಚೀನಾ ಬಿಕ್ಕಟ್ಟು ತಾರಕಕ್ಕೇರಿದ್ದು, ಈ ಶೀತಲ ಸಮರದಲ್ಲಿ ಭಾಗಿಯಾಗದಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಸಲಹೆಯ ರೂಪದಲ್ಲಿ ಭಾರತಕ್ಕೆ ಎಚ್ಚರಿಸಿರುವ ಚೀನಾ, ಅಮೆರಿಕ-ಚೀನಾ ನಡುವಿನ ಬಿಕ್ಕಟ್ಟಿನಲ್ಲಿ ಭಾರತ ಭಾಗಿಯಾದದ್ದೇ ಆದಲ್ಲಿ ಅದಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಆದ್ದರಿಂದ ಭಾರತ ಇದರಲ್ಲಿ ದೂರ ಉಳಿಯುವುದೇ ಸೂಕ್ತ ಎಂದು ಹೇಳಿದೆ.
ಚೀನಾದ ಆಡಳಿತಾ ರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ನ ಈ ಬಗ್ಗೆ ಲೇಖನ ಪ್ರಕಟಿಸಿದ್ದು, ಭಾರತದಲ್ಲಿ ಕೆಲವು ಮಂದಿ ಅಮೆರಿಕ-ಚೀನಾ ನಡುವಿನ ಶೀತಲ ಸಮರದಲ್ಲಿ ಪಾತ್ರ ವಹಿಸಿ ಅಮೆರಿಕ ಪರವಾಗಿ ನಿಲ್ಲಬೇಕೆಂಬ ಧ್ವನಿಗಳು ಕೇಳಿಬರುತ್ತಿವೆ. ಆದರೆ ಇದು ಮುಖ್ಯವಾಹಿನಿಯ ಧ್ವನಿಯಾಗಿಲ್ಲ, ಈ ರೀತಿಯ ಹೇಳಿಕೆಗಳು ದಾರಿ ತಪ್ಪಿಸುವಂಥಹದ್ದಾಗಿದೆ. ಆದರೆ ಭಾರತ ಚೀನಾ ವಿರುದ್ಧವಾಗಿ ಅಮೆರಿಕ ದಾಳವಾಗಬಾರದು, ಒಂದು ವೇಳೆ ಆಗಿದ್ದೇ ಆದಲ್ಲಿ ಭಾರತ ಆರ್ಥಿಕವಾಗಿ ಸಮಸ್ಯೆ ಎದುರಿಸಲಿದೆ ಎಂದು ಚೀನಾ ಹೇಳಿದೆ.