ಕಾಸರಗೋಡು: ಜಿಲ್ಲಾ ರೂಪೀಕರಣದ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಬಹುಮುಖಿ ಆಯಾಮಗಳ ಕಾರ್ಯಕ್ರಮಗಳ ಭಾಗವಾಗಿ ಸಾಹಿತ್ಯ ಸಂಭ್ರಮ ಸ್ಪರ್ಧಾ ವಿಜೇತರಿಗೆ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ರೈ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕನ್ನಡ ಸಾಹಿತ್ಯ ವಿಭಾಗದ ಪ್ರಬಂಧ ಮತ್ತು ಕವನ ರಚನಾ ಸ್ಪರ್ಧೆಯಲ್ಲಿ ಸಾಕಷ್ಟು ಯುವ ಸಾಹಿತಿಗಳು ಪಾಲ್ಗೊಂಡು ಯಶಸ್ವಿಗೊಳಿಸಿರುವುದು ಸ್ತುತ್ಯರ್ಹವಾದುದಾಗಿದೆ. ಕೋವಿಡ್ ನಿಬಂಧನೆಗನುಗುಣವಾಗಿ ಆನ್ ಲೈನ್ ಮೂಲಕ ನಡೆದ ಸ್ಪರ್ಧೆಗಳು ಗಡಿನಾಡಿನ ಕನ್ನಡ ಭಾಷೆ, ಸಾಹಿತ್ಯ, ಕಾಸರಗೋಡಿನ ಹಿರಿಮೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದರು.
ಬಿಜೆಪಿ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಹಾಗೂ ಸಾಹಿತ್ಯ ಸಂಭ್ರಮದ ಸಂಚಾಲಕಿ ರೂಪವಾಣಿ ಆರ್. ಭಟ್, ಪದಾಧಿಕಾರಿಗಳಾದ ಸತೀಶ್ ಯನ್, ರಾಮಪ್ಪ ಮಂಜೇಶ್ವರ, ಖ್ಯಾತ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರಬಂಧ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆದವರಿಗೆ ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪರಿಣಿತ ರವಿ ಎಡನಾಡು ಎರ್ನಾಕುಳಂ, ದ್ವಿತೀಯ ವಿಶ್ವನಾಥ ನೇರಳಕಟ್ಟೆ, ತೃತೀಯ ಅರುಣ ಎನ್ ಮಂಜೇಶ್ವರ, ಕವನ ಸ್ಪರ್ಧೆಯಲ್ಲಿ ಪ್ರಥಮ ನವೀನಚಂದ್ರ ಅಣಂಗೂರು, ದ್ವಿತೀಯ ಗಾಯತ್ರಿ ಪಳ್ಳತ್ತಡ್ಕ, ತೃತೀಯ ಪರಮೇಶ್ವರ ನಾಯ್ಕ ಬಾಳೆಗುಳಿ ಗಳಿಸಿಕೊಂಡಿದ್ದಾರೆ.