ಕಾಸರಗೋಡು/ಉಪ್ಪಳ: ಹಠಾತ್ ಬೆಳವಣಿಗೆಯೊಂದರಲ್ಲಿ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದ್ದು, ಜನಸಾಮಾನ್ಯರಲ್ಲಿ ಕಳವಳದ ಮನೋಸ್ಥಿತಿ ನಿರ್ಮಾಣವಾಯಿತು.
ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಪೆರುವಾಯಿ ಸಮೀಪದ ಬೆರಿಪದವು, ಕನ್ಯಾನ ಸಮೀಪದ ಪಾದೆಕಲ್ಲು, ಮುಗುಳಿ, ಪದ್ಯಾಣ ಸಂಪರ್ಕಿಸುವ ಪೊನ್ನೆಂಗಳ ಮತ್ತಿತರ ಪ್ರಮುಖ ಸಂಪರ್ಕ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದಲ್ಲಿ ಮಣ್ಣುಗಳನ್ನು ಹಾಕಿ ಬಂದ್ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಬಾಧಿತರ ಕಾರಣದಿಂದ ದಿಢೀರ್ ಈ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಆಗಮಿಸುವವರಿಗೆ ಮತ್ತು ಹಿಂತೆರಳುವವರಿಗೆ ಅಂತರ್ ರಾಜ್ಯ ಹೆದ್ದಾರಿ ತಲಪ್ಪಾಡಿ ಚೆಕ್ ಪೆÇೀಸ್ಟ್ ಮೂಲಕ ಮಾತ್ರ ಪಾಸ್ ವ್ಯವಸ್ಥೆ ಮಾಡಿದ್ದು ಆ ಮಾರ್ಗದ ಮೂಲಕ ಮಾತ್ರವೇ ಸಂಚರಿಸಬಹುದಾಗಿದೆ. ಆದರೆ ಕೋವಿಡ್ ನಿಯಂತ್ರಣ ವಿಧೇಯಕಗಳನ್ನು ಮೀರಿ ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆಗಳಿಗೆ ಅನಧಿಕೃತವಾಗಿ ಹೋಗಿ-ಬರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮತ್ತು ದ.ಕ.ಜಿಲ್ಲೆಯ ಗಂಭೀರ ಕೊರೊನಾ ಅಟ್ಟಹಾಸದಿಂದ ಮುಂಜಾಗ್ರತಾ ಕ್ರಮದ ಭಾಗವಾಗಿ ಇಂತಹ ಕ್ರಮಕ್ಕೆ ಡಿ.ಸಿ ಮುಂದಾದರೆಂದು ತಿಳಿದುಬಂದಿದೆ.
ಕೋವಿಡ್ ಹಿನ್ನಲೆಯ ಲಾಕ್ ಡೌನ್ ಹೇರಿಕೆಯ ಆರಂಭ ಸಂದರ್ಭ ಕಾಸರಗೋಡು ಖಳನಾಯಕ ಜಿಲ್ಲೆಯಾಗಿ ಗುರುತಿಸಲ್ಪಟ್ಟ ವೇಳೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ ಸಂಪರ್ಕಿಸುವ ರಸ್ತೆಗಳನ್ನು ಹಠಾತ್ ಬಂದ್ ಮಾಡಿತ್ತು.
ಚೆರ್ಕಳ ಕಲ್ಲಡ್ಕ ರಾಜ್ಯ ಹೆದ್ದಾರಿಯ ಬಂಟ್ವಾಳ ತಾಲೂಕು ಕೇಪು ಗ್ರಾ.ಪಂ ವ್ಯಾಪ್ತಿಯ ಸಾರಡ್ಕ ಚೆಕ್ ಪೆÇೀಸ್ಟ್ ಹಾಗೂ ಪಾಣಾಜೆಯ ಚೆಕ್ ಪೆÇಸ್ಟ್, ದೇಲಂಪಾಡಿ ಸುಳ್ಯ ಮಧ್ಯೆಯ ಜಾಲ್ಸೂರು ಚೆಕ್ ಪೋಸ್ಟ್ ತೆರವುಗೊಳಿಸುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ಸ್ ಪಕ್ಷಗಳು ನಾಟಕೀಯ ಬೆಳವಣಿಗೆಗಳನ್ನು ನಡೆಸುತ್ತಿರುವ ಮಧ್ಯೆ ಜಿಲ್ಲಾಡಳಿತ ಕರ್ನಾಟಕ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿರುವುದು ತೀವ್ರ ಕಳವಳ ಹಾಗೂ ಗಡಿನಾಡಿನ ಜನರ ಅತಂತ್ರತೆಯ ಮುಂದುವರಿಕೆಯ ಕರಾಳತೆಗೆ ಸಾಕ್ಷಿಯಾಗುತ್ತಿದೆ.