ಢಾಕಾ: ಕೊರೋನಾವೈರಸ್ ಕಾರಣದಿಂದಾಗಿ ಬಾಂಗ್ಲಾದೇಶ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಮೊಹಸಿನ್ ಚೌಧರಿ ಸೋಮವಾರ ನಿಧನವಾಗಿದ್ದಾರೆ ಎಂದು ಬಾಂಗ್ಲಾ ಸರ್ಕಾರ ಖಚಿತಪಡಿಸಿದೆ.
ಚೌಧರಿ ಬೆಳಿಗ್ಗೆ 9.30 ಕ್ಕೆ ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಯಲ್ಲಿ (ಸಿಎಮ್ಹೆಚ್) ಚಿಕಿತ್ಸೆ ಫಲಿಸದೆ ನಿಧನರಾದರು ಎಂದು bdnews24 ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸೆಲೀನಾ ಹಕ್ ಅವರ ಹೇಳಿಕೆ ಉಲ್ಲೇಖಿಸಿ ಪ್ರಕಟಿಸಿದೆ. ಕೊರೋನಾವೈರಸ್ ಸೋಂಕು ದೃಢಪಟ್ಟ ನಂತರ ಅವರನ್ನು ಮೇ 29 ರಂದು ಸಿಎಮ್ಹೆಚ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಜೂನ್ 6 ರಂದು ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಜೂನ್ 18ರಿಂದ ಅವರು ವೆಂಟಿಲೇಟರ್ ಬೆಂಬಲ ಪಡೆದಿದ್ದರು. ಚೌಧರಿ ಜನವರಿಯಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಜೂನ್ 14 ರಂದು ಸರ್ಕಾರ ಅವರನ್ನು ರಕ್ಷಣಾ ಸಚಿವಾಲಯದ ಹಿರಿಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿತು.
ಸೋಮವಾರ ಬೆಳಿಗ್ಗೆಯವರೆಗೆ, ಬಾಂಗ್ಲಾದೇಶವು ಒಟ್ಟು 137,787 ಕೊರೋನಾ ಪ್ರಕರಣಗಳನ್ನು ವರದಿ ಮಾಡಿದೆ, ಇದು ದಕ್ಷಿಣ ಏಷ್ಯಾದಲ್ಲಿ ಅತಿ ಹೆಚ್ಚು ಸೋಂಕಿತರ ಸಂಖ್ಯೆಯಾಗಿದೆ. ದೇಶದಲ್ಲಿ ಇದುವರೆಗೆ 1,738 ಸಾವುಗಳು ಸಂಭವಿಸಿವೆ.