ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಇತರೆ ದೇಶಗಳಿಗಿಂತ ಮುಂದೆ ಇದೆ ಮತ್ತು ಕೊವಿಡ್-19 ಪೀಕ್ ನಿಂದ ದೇಶ ತುಂಬಾ ದೂರದಲ್ಲಿದೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಹೇಳಿದೆ.
ನಿನ್ನೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ಕ್ರಮಗಳು ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ.
ದೇಶದ ಒಟ್ಟು ಸೋಂಕಿತರ ಸಂಖ್ಯೆ ನೋಡಿ, ಭಾರತ ಅತಿ ಹೆಚ್ಚು ಕೊವಿಡ್-19 ಪ್ರಕರಣಗಳನ್ನು ಹೊಂದಿರುವ ಏಳನೇ ದೇಶ ಎಂದು ಹೇಳುವುದು ತಪ್ಪಾಗುತ್ತದೆ. ದೇಶದ ಜನಸಂಖ್ಯೆಯನ್ನು ನಾವು ಪರಿಗಣಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಜನಸಂಖ್ಯೆಗೆ ಸಮನಾಗಿರುವ ಒಟ್ಟು 14 ದೇಶಗಳಲ್ಲಿ 55.2 ಪಟ್ಟು ಹೆಚ್ಚು ಕೊರೋನಾ ಸಾವುಗಳು ಸಂಭವಿಸಿವೆ. ಆದರೆ ನಮ್ಮ ದೇಶದಲ್ಲಿ ಕೊವಿಡ್-19 ಸಾವಿನ ಪ್ರಮಾಣ ಶೇ.2.82ರಷ್ಟು ಇದೆ ಮತ್ತು ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ. ಜಾಗತಿಕ ಸಾವಿನ ಪ್ರಮಾಣ ಶೇ.6.13 ರಷ್ಟು ಇದೆ ಎಂದು ಅಗರ್ವಾಲ್ ಅವರು ವಿವರಿಸಿದರು.ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 8,171 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,98,706ಕ್ಕೆ ಏರಿಕೆಯಾಗಿದೆ. ಅಂತೆಯೇ 24 ಗಂಟೆಗಳಲ್ಲಿ 204 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 5,598ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ 97,581 ಸಕ್ರಿಯ ಪ್ರಕರಣಗಳಿದ್ದು, 95,527 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.