ತೆಹ್ರಾನ್: ಇರಾನ್ನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಜನವರಿಯಲ್ಲಿ ವಾಯುದಾಳಿ ನಡೆಸಿದ್ದ ಅಮೆರಿಕ ‘ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ)’ ಕ್ವಾಡ್ಸ್ ಫೋರ್ಸ್ ಘಟಕದ ಮುಖ್ಯಸ್ಥ ಜನರಲ್ ಖಾಸಿಮ್ ಸುಲೈಮಾನಿ ಅವರನ್ನು ಹತ್ಯೆಗೈದಿದೆ. ಅಂದಿನಿಂದಲೂ ಯುಎಸ್-ಇರಾನ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.
ಅದರ ಮುಂದುವರಿದ ಭಾಗವಾಗಿ ಇರಾನ್ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಸುಮಾರು 30 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಅಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷನನ್ನು ವಶಕ್ಕೆ ಪಡೆಯಲು ಸಹಾಯ ಮಾಡಿ ಎಂದು ಇಂಟರ್ಪೋಲ್ನ್ನು ಕೇಳಿಕೊಂಡಿದೆ.
ಹ್ರಾನ್ನ ಪ್ರಾಸಿಕ್ಯೂಟರ್ ಅಲಿ ಅಲ್ಖಾಸಿಮರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜನವರಿ 3ರಂದು ನಡೆದ ವಾಯುದಾಳಿ, ಜನರಲ್ ಖಾಸಿಮ್ ಸುಲೈಮಾನಿ ಅವರ ಹತ್ಯೆಯಲ್ಲಿ ಟ್ರಂಪ್ ಸೇರಿ 30ಕ್ಕೂ ಹೆಚ್ಚು ಜನರ ಪಾತ್ರವಿದೆ. ಹಾಗಾಗಿ ಅವರು ಭಯೋತ್ಪಾದನೆ ಮತ್ತು ಹತ್ಯೆ ಆರೋಪದಡಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಟ್ರಂಪ್ ಹೊರತಾಗಿ ಬೇರೆ ಯಾರ ಹೆಸರನ್ನೂ ಪ್ರಾಸಿಕ್ಯೂಟರ್ ಹೇಳಿಲ್ಲ. ಆದರೆ ಅಮೆರಿಕ ಅಧ್ಯಕ್ಷರನ್ನು ಮಾತ್ರ ಬಿಡುವುದಿಲ್ಲ. ಅವರು ಅಧ್ಯಕ್ಷಸ್ಥಾನದಿಂದ ಕೆಳಗೆ ಇಳಿದ ಮೇಲೆ ಕೂಡ ಈ ಪ್ರಕರಣದ ವಿಚಾರಣೆ ಎದುರಿಸಲೇಬೇಕು ಎಂದು ತಿಳಿಸಿದ್ದಾರೆ.
ಟ್ರಂಪ್ ಹಾಗೂ ಉಳಿದವರ ಬಂಧನಕ್ಕಾಗಿ ರೆಡ್ ನೋಟಿಸ್ ಹೊರಡಿಸಲು ಇಂಟರ್ಪೋಲ್ಗೆ ಮನವಿ ಮಾಡಲಾಗಿದೆ ಎಂದು ಅಲಿ ಅಲ್ಖಾಸಿಮರ್ ತಿಳಿಸಿದ್ದಾರೆ. ಆದರೆ ಫ್ರಾನ್ಸ್ನಲ್ಲಿರುವ ಇಂಟರ್ಪೋಲ್ ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.