ಕಾಸರಗೋಡು: ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ 2020-21 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ನಿರ್ಮಿಸಿರುವ ಜನಪರ ಹೋಟೆಲ್ ಆರಂಭಗೊಂಡಿತು.
ರಾಜ್ಯ ಸರ್ಕಾರದ ಬಜೆಟ್ ಘೋಷಣೆಯ ಪ್ರಕಾರ ಗ್ರಾಮ ಪಂಚಾಯತ್ ಒಂದರಲ್ಲಿ ನ್ಯಾಯಬೆಲೆಗೆ ಆಹಾರ ಒದಗಿಸುವ ಉದ್ದೇಶದಿಂದ ಹಸಿವು ರಹಿತ ಕೇರಳ ಯೋಜನೆಯ ಅಂಗವಾಗಿ 20 ರೂ.ಗೆ ಭೋಜನ ಒದಗಿಸುವ ಜನಪರ ಹೊಟೇಲ್ ಇದಾಗಿದೆ. ಶೇ.10 ಮಂದಿ ಬಡವರಿಗೆ ಇಲ್ಲಿ ಭೋಜನ ಉಚಿತವಾಗಿರುವುದು. ಇದರ ಮೊಬಲಗು ಪ್ರಾಯೋಜಕರು ಒದಗಿಸುವರು. ಸರಕಾರ ಊಟವೊಂದಕ್ಕೆ 5 ರೂ.ಸಬ್ಸಿಡಿ ನೀಡಲಿದೆ. ಈ ಸಂಸ್ಥೆಗೆ ಕಿಲೋಗೆ 10.90 ರೂ.ನಂತೆ ಅಕ್ಕಿ ವಿತರಣೆ ನಡೆಸಲಿದೆ.
ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಹೊಟೇಲ್ ಉದ್ಘಾಟಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸಹಿತ ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಪಾಲಿಸಿಕೊಂಡು ಸಮಾರಂಭ ಜರುಗಿತು. ಪಂಚಾಯತ್ ಅಧ್ಯಕ್ಷೆ ಪ್ರಸೀದಾ ರಾಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಕೆ.ಸುಕುಮಾರನ್, ಎ.ಅಪ್ಪುಕುಟನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಸುರೇಂದ್ರನ್, ಪಿ.ಆರ್.ಚಾಕೋ, ಎ.ಸಿ.ಜೋಸ್, ಸಿ.ಪಿ.ಸುರೇಶನ್ ಅಸೈನಾರ್, ಟಿ.ಪಿ. ಅಪ್ಪುಕುಟ್ಟನ್, ಮಾತ್ಯಂ ವರ್ಕಿ, ಕೆ.ಪಿ.ಲಕ್ಷಿ ಮೊದಲಾದವರು ಉಪಸ್ಥಿತರಿದ್ದರು.