ಬದಿಯಡ್ಕ: ಕೊರೊನಾ ಹಿನ್ನೆಲೆಯಲ್ಲಿ ಶಾಲಾರಂಭ ವಿಳಂಬಗೊಳ್ಳುತ್ತಿರುವ ಕಾರಣ ರಾಜ್ಯ ಸರ್ಕಾರ ಆರಂಭಿಸಿರುವ ಆನ್ ಲೈನ್ ತರಗತಿಗಳು ಒಂದೆಡೆ ಪ್ರಶಂಸೆಗೆ ಪಾತ್ರವಾಗುತ್ತಿದ್ದರೂ ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ, ಹಿಂದುಳಿತ ಜಾತಿ-ವರ್ಗಗಳ ಕಾಲನಿ ನಿವಾಸಿಗಳಾದ ಬಡ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿದ್ದು, ವಿದ್ಯಾರ್ಥಿಗಳ ಸ್ಥಿತಿ ತೀವ್ರ ಕಳವಳಕಾರಿಯಾಗುತ್ತಿದೆ.
ಬದಿಯಡ್ಕ ಗ್ರಾ.ಪಂ.ನ 6 ಕಾಲನಿಗಳ ವಿದ್ಯಾರ್ಥಿಗಳು ಆಧುನಿಕ ಸೌಲಭ್ಯ ಇಲ್ಲದ ಕಾರಣ ಆನ್ ಲೈನ್ ತರಗತಿ ವೀಕ್ಷಿಸಲಾಗದೆ ಪರಿತಪಿಸುತ್ತಿರುವುದು ಕಂಡುಬಂದಿದೆ.
ಕಾರ್ಯಾಡು, ಕಾಡಮನೆ, ದರ್ಬೆತ್ತಡ್ಕ, ಮಾಡತ್ತಡ್ಕ, ಪೆರಡಾಲ, ಪೆರಿಯಡ್ಕ ಕೊರಗ ಕಾಲನಿಗಳಲ್ಲಿ ಆಧುನಿಕ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ಪ್ರತಿಕೂಲತೆ ಸೃಷ್ಟಿಯಾಗಿದೆ. ಕಾಡಮನೆ, ಕಾರ್ಯಾಡು, ದರ್ಬೆತ್ತಡ್ಕ, ಪೆರ್ಯಡ್ಕದ ಕಾಲನಿಗಳಲ್ಲಿನ 14 ವಿದ್ಯಾರ್ಥಿಗಳ ಪೈಕಿ 3 ಮಂದಿ ಪ್ರಸ್ತುತ ಸಾಲಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಪೆರಡಾಲ ಕಾಲನಿಯೊಂದರಲ್ಲೇ ವಿವಿಧ ತರಗತಿಯಲ್ಲಿ ವ್ಯಾಸಂಗಗೈಯ್ಯುವ 20ರಷ್ಟು ವಿದ್ಯಾರ್ಥಿಗಳಿದ್ದಾರೆ. ಕೆಲವು ಬೆರಳೆಣಿಯ ಮನೆಗಳಲ್ಲಿ ಟಿವಿ ವ್ಯವಸ್ಥೆಗಳಿದ್ದರೂ ಮನೆಮಂದಿಗೆ ಸೀರಿಯಲ್ ವೀಕ್ಷಿಸಲಷ್ಟೇ ಆಸಕ್ತಿ. ಜೊತೆಗೆ ಯಾವ ಚಾನೆಲ್ ಆನ್ ಲೈನ್ ಶಿಕ್ಷಣ ಲಭ್ಯವಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಅರಿವಿಲ್ಲದಿರುವುದಾಗಿ ತಿಳಿದುಬಂದಿದೆ. ಕಾಲನಿಗಳಲ್ಲಿ ಸಮುದಾಯ ಕೇಂದ್ರಗಳೆಂಬ ವ್ಯವಸ್ಥೆಗಳಿದ್ದರೂ ದಶಕಗಳಿಂದ ಸಮುದಾಯ ಕೇಂದ್ರಗಳು ನಿಷ್ಕ್ರೀಯವಾಗಿರುವುದು ಇದೀಗ ಹೊಡೆತವಾಗಿ ಪರಿಣಮಿಸಿದೆ.
49 ಪ.ಜಾತಿ ಕುಟುಂಬಗಳಲ್ಲಿ 250 ಮಂದಿ ವಿವಿಧ ತರಗತಿಗಳ ವಿದ್ಯಾರ್ಥಿಗಳು ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಪ.ಜಾತಿ-ವಿಭಾಗದ ಅಧಿಕೃತರು, ಪ್ರಮೋಟರ್ ಗಳು, ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಸಮರ್ಥರಾಗಿ ಕಾರ್ಯನಿರ್ವಹಿಸದಿರುವುದರಿಂದ ಭವಿಷ್ಯತ್ತಿನ ಕುಡಿಗಳು ಕೊರೊನಾ ಸಂಕಷ್ಟದ ಮಧ್ಯೆ ಆನ್ ಲೈನ್ ಶಿಕ್ಷಣದಂತಹ ಆಧುನಿಕ ಸೌಕರ್ಯಗಳಿಂದ ವಂಚಿತರಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಅಭಿಮತ:
ಕಾಲನಿ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ವಿಜಯವಾಣಿಯ ಈ ಕಾಳಜಿಯಿಂದಷ್ಟೆ ಮಾಹಿತಿ ಲಭ್ಯವಾಗಿದೆ. ಆದರೆ ಗ್ರಾ.ಪಂ.ನ ಮಿತಿಯಲ್ಲಿ ಕಾಲನಿಯ ಸಮುದಾಯ ಕೇಂದ್ರದಲ್ಲಿ ವಿದ್ಯಾರ್ಥಿಗಳ ಆನ್ ಲೈನ್ ತರಗತಿಗಳಿಗೆ ಟಿವಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದು. ಸರ್ಕಾರ ನಿರ್ದೇಶನ ನೀಡಿದರೆ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ದಾನಿಗಳ, ಸಂಘಸಂಸ್ಥೆಗಳ ನೆರವಿನೊಂದಿಗೆ ಸಮುದಾಯ ಕೇಂದ್ರಕ್ಕೊಂದರಂತೆ ಟಿವಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು.
ಕೆ.ಎನ್.ಕೃಷ್ಣ ಭಟ್.
ಅಧ್ಯಕ್ಷಕರು ಬದಿಯಡ್ಕ ಗ್ರಾ.ಪಂ.