ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜನರ ಧ್ವನಿಯಾಗಿ, ಸಮಾಜದ ಕೈಗನ್ನಡಿಯಾಗಿ ಕನ್ನಡ ಪತ್ರಿಕೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ನಾಗರಿಕ ಬದುಕಿನಲ್ಲಿ ವಿಶಿಷ್ಟ ಸ್ಥಾನಮಾನವನ್ನು ತನ್ನದಾಗಿಸಿಕೊಂಡಿದೆ.
ಭಾರತದಲ್ಲಿ ಧರ್ಮ ಪ್ರಚಾರಕ್ಕಾಗಿ ಬಂದ ಕ್ರೈಸ್ತ ಮಿಷನರಿಗಳೇ ಪತ್ರಿಕೋದ್ಯಮದ ಮೂಲಪುರುಷರು. ಮೊತ್ತಮೊದಲಿಗೆ ಪುಸ್ತಕ ರೂಪದಲ್ಲಿ, ನಿಯತಕಾಲಿಕೆ ರೂಪದಲ್ಲಿ ಪ್ರಸಾರ ಆರಂಭಿಸಿದ ಪತ್ರಿಕೋದ್ಯಮ ಕ್ರಮೇಣ ದಿನಪತ್ರಿಕೆ ರೂಪದಲ್ಲಿ ಪ್ರಸರಣಕ್ಕೆ ಮುನ್ನುಡಿ ಬರೆಯಿತು. 1440ರಲ್ಲಿ ಜರ್ಮನಿಯ ಜೋಹಾನ್ ಗುಟನ್ಬರ್ಗ್ ಎಂಬಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ ಕ್ರೈಸ್ತರ ಪವಿತ್ರ ಬೈಬಲ್ ಗ್ರಂಥವನ್ನು ಮುದ್ರಿಸಿದಾಗ ಅಂದಿನ ದಿನಗಳಲ್ಲಿ ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿ ಹೆಸರು ಪಡೆಯಿತು.
ಅದೇ ರೀತಿ ಕನ್ನಡ ಪತ್ರಿಕೋದ್ಯಮದ ಪಿತಾಮಹರೆಂಬ ಖ್ಯಾತಿಯೂ ಕ್ರೈಸ್ತ ಮಿಶನರಿಗಳಿಗೇ ಸಲ್ಲುತ್ತದೆ. ಧರ್ಮ ಪ್ರಚಾರದ ಜೊತೆಗೆ ಒಂದು ಪತ್ರಿಕೆಯನ್ನು ಪ್ರಸರಣ ರೂಪಕ್ಕೆ ತಂದು ಆ ಮೂಲಕ ಜನರಿಗೆ ಸುದ್ದಿ ಹಾಗೂ ಮಾಹಿತಿ ನೀಡಬೇಕೆಂಬ ಬಾಶೆಲ್ ಮಿಷನ್ ಚಿಂತಿಸಿದ ಫಲವಾಗಿ ಕನ್ನಡದ ಮೊತ್ತ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಎಂಬ ಪಾಕ್ಷಿಕ 1843 ರಲ್ಲಿ ಸಾಕಾರ ರೂಪ ಪಡೆದು ನಾಗರಿಕ ಸಮಾಜಕ್ಕೆ ಅರ್ಪಣೆಗೊಂಡಿತು. ಬಾಶಲ್ ಮಿಷನ್ನ ‘ರೆವರೆಂಡ್ ಹರ್ಮನ್ ಮೊಗ್ಲಿಂಗ್’ ಈ ಪತ್ರಿಕೆಯ ಸಂಪಾದಕರಾಗಿದ್ದರು. ಇದರಿಂದಾಗಿ ಇವರನ್ನು ‘ಕರ್ನಾಟಕ ಪತ್ರಿಕಾ ರಂಗದ ಪಿತಾಮಹ’ ಎಂದು ಇಂದಿಗೂ ಕನ್ನಡ ಪತ್ರಿಕಾ ರಂಗ ಸ್ಮರಿಸಿಕೊಳ್ಳುತ್ತಿದೆ.
ಪ್ರಮುಖ ಸುದ್ದಿಗಳು ಹಾಗೂ ಸ್ಥಳೀಯ ಆಸಕ್ತಿದಾಯಕ ವಿಚಾರಗಳನ್ನು ಹೊತ್ತುಕೊಂಡು ‘ಮಂಗಳೂರು ಸಮಾಚಾರ’ದ ಮೊದಲ ಸಂಚಿಕೆ 1843ರ ಜುಲೈ 1 ರಂದು ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡ ಪತ್ರಿಕಾ ರಂಗದ ಮೊದಲ ಆವೃತ್ತಿ ಹೊರಬಂದ ದಿನವನ್ನು ಸ್ಮರಿಸುವುದಕ್ಕಾಗಿ ಕರ್ನಾಟಕದಲ್ಲಿ ಇಂದಿಗೂ ಜುಲೈ 1 ರಂದು ‘ಪತ್ರಿಕಾ ದಿನ’ವಾಗಿ ಆಚರಿಸಲ್ಪಡುತ್ತಿದೆ. ಆ ಪ್ರಯುಕ್ತ ಜುಲೈ ತಿಂಗಳು ಪೂರ್ತಿ ಪತ್ರಕರ್ತರ ಸಂಘ, ಕಾರ್ಯನಿರತ ಪತ್ರಕರ್ತ ಸಂಘ, ಕರ್ನಾಟಕ ಪತ್ರಕರ್ತರ ಸಂಘ, ಎಡಿಟರ್ಸ್ ಕ್ಲಬ್, ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ಮೊದಲಾದ ಮಾಧ್ಯಮ ಪ್ರತಿನಿಧಿಗಳ ಸಂಘ-ಸಂಸ್ಥೆಗಳು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವಿವಿಧ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ಪತ್ರಿಕೋದ್ಯಮ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ.
ಕನ್ನಡದ ಚೊಚ್ಚಲ ಪತ್ರಿಕೆಯಾಗಿ ಹೊರಬಂದ ‘ಮಂಗಳೂರು ಸಮಾಚಾರ’ ಪ್ರಜ್ಞಾಪೂರ್ವಕ ಮಾಹಿತಿ, ಶಿಕ್ಷಣ ಮತ್ತು ಮನೋರಂಜನೆಯನ್ನು ಅಂದಿನ ಜನತೆಗೆ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿತ್ತು. ಆಧುನಿಕ ಪತ್ರಿಕೋದ್ಯಮದ ಎಲ್ಲ ಲಕ್ಷಣಗಳನ್ನು ಮೈಗೂಡಿಸಿಕೊಂಡು ಮಂಗಳೂರು ಸಮಾಚಾರ ಹೊರಬರುವ ಮೂಲಕ ಜನರ ಜ್ಞಾನ ದಾಹಕ್ಕೆ ಸೂಕ್ತ ಸಿಂಚನವನ್ನು ನೀಡಿತ್ತು. ಇವೆಲ್ಲದರೊಟ್ಟಿಗೆ ಪತ್ರಿಕೆ ದೇಶಪ್ರೇಮಕ್ಕೆ, ದೇಶಭಕ್ತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ವಿದೇಶಿ ಆಕ್ರಮಣಕಾರರ ವಿರುದ್ದ ಜನ ಸಂಘಟಿತರಾಗಿ ಎದ್ದುನಿಲ್ಲುವಂತೆ ಪತ್ರಿಕೆ ಪ್ರೇರಣೆ ನೀಡಿತು. ಸ್ಥಳೀಯ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ವಿಷಯಗಳ ಮಾಹಿತಿಯ ಜೊತೆಗೆ ಅಂತರಾಷ್ಟ್ರೀಯ ಆಗು ಹೋಗುಗಳ ಬಗ್ಗೆ ಓದುಗರಿಗೆ ಸರಳ ಭಾಷೆಯಲ್ಲಿ ಮನದಟ್ಟು ಮಾಡಿದ ಪತ್ರಿಕೆ ಸ್ವಾತಂತ್ರ್ಯ, ಸಮಾನತೆ ಹಾಗೂ ನ್ಯಾಯ ಮೊದಲಾದ ಮೌಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿಯೂ ಯಶಸ್ಸನ್ನು ಕಂಡಿತ್ತು.
ಮಂಗಳೂರಿನಿಂದ ಕಲ್ಲಚ್ಚಿನಲ್ಲಿ ಪ್ರಸರಣಗೊಳ್ಳುತ್ತಿದ್ದ ‘ಮಂಗಳೂರು ಸಮಾಚಾರ’ ಪತ್ರಿಕೆ ಪ್ರಾರಂಭಗೊಂಡ ಒಂದು ವರ್ಷದ ಬಳಿಕ ಅಂದರೆ 1844ರ ಮಾರ್ಚ್ ತಿಂಗಳಲ್ಲಿ ಬಳ್ಳಾರಿ ಕಾಗದ ಮುದ್ರಣಾಲಯದಲ್ಲಿ ಮುದ್ರಿಸುವ ಉದ್ದೇಶದಿಂದ ಬಳ್ಳಾರಿಗೆ ವರ್ಗಾಯಿಸಲಾಯಿತು. ಇಲ್ಲಿ ಪತ್ರಿಕೆಗೆ ‘ಕನ್ನಡ ಮಿಷನರಿ ಸಮಾಚಾರ’ ಎಂದು ಮರು ನಾಮಕರಣಗೊಳಿಸಲಾಯಿತು. ಇಲ್ಲಿ ಮೊಗ್ಲಿಂಗ್ ಅವರ ಆಪ್ತನಾಗಿದ್ದ ಇನ್ನೊಬ್ಬ ಮಿಷನರಿ ರೀಡ್ ಎಂಬಾತ ಪತ್ರಿಕೆಯ ಪ್ರಕಟಣೆ ಜವಾಬ್ದಾರಿ ಹೊತ್ತುಕೊಂಡರು. ಆದರೆ ರೀಡ್ ಅವರ ಮರಣಾನಂತರ ಪತ್ರಿಕೆಯ ಪ್ರಸರಣಕ್ಕೆ ತೀವ್ರ ಹೊಡೆತ ಬಿತ್ತು. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪತ್ರಿಕೆ ಅಲ್ಲಿ ಬಾಳಲಿಲ್ಲ.
ದೇಶದ ಸ್ವಾತಂತ್ರ್ಯ ಹಾಗೂ ಏಕತೆಯ ಹಿನ್ನಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮೊಗ್ಲಿಂಗ್ 1857ರಲ್ಲಿ ‘ಕನ್ನಡ ಸುವಾಟಿಕ’ ಎಂಬ ಇನ್ನೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಎರಡು ವರ್ಷದ ಬಳಿಕ ಅದೂ ಕೂಡಾ ನಿಂತು ಹೋಯಿತು.
ದೇಶದ ಸ್ವಾತಂತ್ರ್ಯ ಹಾಗೂ ಏಕತೆಯ ಹಿನ್ನಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮೊಗ್ಲಿಂಗ್ 1857ರಲ್ಲಿ ‘ಕನ್ನಡ ಸುವಾಟಿಕ’ ಎಂಬ ಇನ್ನೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಎರಡು ವರ್ಷದ ಬಳಿಕ ಅದೂ ಕೂಡಾ ನಿಂತು ಹೋಯಿತು.
ಸಮರ್ಪಕ ಸಂಪರ್ಕ ಸಾಧನಗಳಿಲ್ಲದ ಪ್ರಾಚೀನ ಶಿಲಾಯುಗದ ಕಾಲದಲ್ಲಿ ಕನ್ನಡ ಪತ್ರಿಕೆಯೊಂದನ್ನು ಹುಟ್ಟು ಹಾಕಿ ಕನ್ನಡ ಪತ್ರಿಕಾ ರಂಗಕ್ಕೆ ಮುನ್ನುಡಿ ಬರೆದ ಕನ್ನಡ ಪತ್ರಿಕಾ ರಂಗದ ಮೂಲ ಪುರುಷ ಎಂದೇ ಗುರುತಿಸಿಕೊಂಡಿರುವ ಮೊಗ್ಲಿಂಗ್ ಲೇಖಕ, ಸಾಹಿತಿ, ಇತಿಹಾಸಕಾರ, ತರ್ಜುಮೆದಾರ ಹಾಗೂ ಸಂಗ್ರಹಕಾರರಾಗಿಯೂ ವಿಶೇಷ ಗುಣವನ್ನು ಮೈಗೂಡಿಸಿಕೊಂಡಿದ್ದವರು. ಮೂಲತಃ ಜರ್ಮನಿ ದೇಶದ ಬ್ರಾಕನ್ ಹೀಮ್ ಎಂಬ ಗ್ರಾಮದಲ್ಲಿ ವಿಲೆಲ ಲುಡವಿಗ ಫೆಡ್ರಿಕ್ ಮೊಗ್ಲಿಂಗ್ ಹಾಗೂ ರೀಸೆ ದಂಪತಿಯ ಪುತ್ರನಾಗಿ 1811 ರಲ್ಲಿ ಜನಿಸಿದ ‘ರೆವರೆಂಡ್ ಹರ್ಮನ್ ಫೆಡರಿಂಗ್ ಮೊಗ್ಲಿಂಗ್’ 1834 ರಲ್ಲಿ ತನ್ನ ವ್ಯಾಸಂಗವನ್ನು ಮುಗಿಸಿ ಧರ್ಮ ಪ್ರಚಾರಕನಾಗಿ ಸೇವೆಯನ್ನು ಪ್ರಾರಂಭಿಸಿದ್ದರು. 1836ರಲ್ಲಿ ಇಂಗ್ಲಂಡ್ನಿಂದ ಭಾರತಕ್ಕೆ ಆಗಮಿಸಿದ ಮೊಗ್ಲಿಂಗ್ ಅದಾಗಲೇ ಮಂಗಳೂರಿನಲ್ಲಿ ಕಾರ್ಯಪ್ರವೃತ್ತವಾಗಿದ್ದ ಬಾಶೆಲ್ ಮಿಷನ್ನೊಂದಿಗೆ ಸೇರಿಕೊಂಡು ಧರ್ಮ ಪ್ರಚಾರದಲ್ಲಿಯೇ ತೊಡಗಿಸಿಕೊಂಡಿದ್ದರು.
1837ರಲ್ಲಿ ಧಾರವಾಡಕ್ಕೆ ಆಗಮಿಸಿ ಶಾಲೆಯನ್ನೂ ಆರಂಭಿಸಿದ ಮೊಗ್ಲಿಂಗ್ ಧರ್ಮಪ್ರಚಾರ ಹಾಗೂ ಸಮಾಜ ಸೇವೆಯಿಂದ ಮಾತ್ರ ಜನ ಸೇವೆ ಸಾಧ್ಯವಿಲ್ಲ ಎಂದು ಮನಗಂಡು ಜಗತ್ತಿನ ನಾಲ್ಕು ದಿಸೆಗಳಿಂದ ಮಾಹಿತಿ ಸಂಗ್ರಹಿಸಿ ಜನರಿಗೆ ನೀಡಿದಾಗ ಇನ್ನಷ್ಟು ತೃಪ್ತಿ ದೊರೆಯಬಹುದೆಂದು ಭಾವಿಸಿದ ಪರಿಣಾಮ 4 ಪುಟಗಳ ಅಂದಿನ ಒಂದಾಣೆ (ನಾಲ್ಕು ಪೈಸೆ)ಯ ‘ಮಂಗಳೂರು ಸಮಾಚಾರ ಪತ್ರಿಕೆ’ ರೂಪದಳೆಯಿತು.
ಮೊಗ್ಲಿಂಬ್ ಓರ್ವ ಧರ್ಮ ಪ್ರಚಾರಕ್ಕಾಗಿದ್ದರೂ ಪತ್ರಿಕೆಯನ್ನು ಕ್ರೈಸ್ತ ಧರ್ಮದ ಪ್ರಚಾರಕ್ಕೋ ಅಥವಾ ಯಾವುದೇ ಧಾರ್ಮಿಕ ಉದ್ದೇಶಗಳಿಗೆ ಬಳಸಿಕೊಳ್ಳದೆ ಪ್ರತಿಯೊಂದು ಧರ್ಮೀಯರ ಅಂತರಾಳವನ್ನು ಬಿಚ್ಚಿಡಲು ಅವಕಾಶ ನೀಡಿದ್ದರು. ಪತ್ರಿಕೆಯ ಮುಖಾಂತರ ಪತ್ರಿಕಾ ಧರ್ಮ ಹಾಗೂ ಲಾಭಗಳಿಕೆ ನಡುವೆ ಸಮಾನ ಅಂತರವನ್ನು ಕಾಯ್ದುಕೊಂಡು ಬಂದ ಮೊಗ್ಲಿಂಗ್ ಸಮಾಜದಲ್ಲಿ ಆರೋಗ್ಯಕರ ಸಮತೋಲನಕ್ಕೆ ಒತ್ತು ನೀಡಿದ್ದರು.
19ನೇ ಶತಮಾನದಲ್ಲಿ ಬಾಳಿ ಬದುಕಿದ ಕನ್ನಡ ಪತ್ರಿಕೋದ್ಯಮದ ಪಿತಾಮಹ ಮೊಗ್ಲಿಂಗ್ ಜರ್ಮನ್ ಮೂಲದವನಾದರೂ ಕನ್ನಡದಲ್ಲಿ ಅಪಾರ ಆಸಕ್ತಿ ಹಾಗೂ ಪ್ರೀತಿನ್ನಿಟ್ಟುಕೊಂಡು ಕನ್ನಡ ಭಾಷೆಗೆ ಸಂಬಂಧಿಸಿ ಅನೇಕ ವಿಷಯಗಳಲ್ಲಿ ಮೊದಲಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಕನ್ನಡದಲ್ಲಿ ‘ಪತ್ರ ಸಾಹಿತ್ಯ’ ಪ್ರಾರಂಭಿಸಿದ ಹೆಗ್ಗಳಿಕೆ ಕೂಡಾ ಮೊಗ್ಲಿಂಗ್ಗೆ ಸಲ್ಲುತ್ತದೆ. ಈತ ಮಂಗಳೂರಿಗೆ ಬಂದು ರಚಿಸಿದ ಚೊಚ್ಚಲ ‘ಬಿಬ್ಲಿಯಾಥೆಕಾ ಕರ್ನಾಟಕ’ ಎಂಬ ಗ್ರಂಥವು ಜರ್ಮನಿವರೆಗೂ ತಲುಪಿತು. ಈತ ಕನ್ನಡಕ್ಕಾಗಿ ಸಲ್ಲಿಸಿದ ಮಹತ್ತರ ಕಾರ್ಯಕ್ಕಾಗಿ 1858ರಲ್ಲಿ ‘ಗೌರವ ಡಾಕ್ಟರೇಟ್’ ಪ್ರಶಸ್ತಿಯೂ ಒಲಿದು ಬಂತು. ಕನ್ನಡ ಪರ ಸೇವೆಗಾಗಿ ದೊರೆತ ಮೊತ್ತ ಮೊದಲ ಡಾಕ್ಟರೇಟ್ ಪದವಿ ಇದಾಗಿತ್ತು ಎಂಬುದನ್ನಿಲ್ಲಿ ಪ್ರಸ್ತಾಪಿಸಲೇಬೇಕು.
ಕನ್ನಡಕ್ಕಾಗಿ ತೋರಿದ ಪ್ರೀತಿ, ಅಭಿಮಾನ, ಆಸಕ್ತಿ ಮೊಗ್ಲಿಂಗೇತರ ಇನ್ಯಾವ ವಿದೇಶಿಯರಲ್ಲೂ ಕಂಡು ಬಂದಿಲ್ಲ ಎಂಬುದು ಕೂಡಾ ಅಷ್ಟೇ ಪ್ರಾಮುಖ್ಯವನ್ನು ಪಡೆಯುತ್ತದೆ. ಓರ್ವ ವಿದೇಶಿಗನಾಗಿ, ಅದರಲ್ಲೂ ಓರ್ವ ಧರ್ಮ ಪ್ರಚಾರಕನಾಗಿ ಭಾರತಕ್ಕೆ ಬಂದು ಕನ್ನಡಕ್ಕಾಗಿ ಇನ್ನಿಲ್ಲದ ಶ್ರಮವಹಿಸಿ ಕನ್ನಡ ಪತ್ರಿಕೋದ್ಯಮದ ಮೂಲಪುರುಷನಾಗಿ ಹೆಸರು ಪಡೆದ ‘ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್’ 1881ರಲ್ಲಿ ತನ್ನ ಜೀವಿತದ 70ನೇ ವರ್ಷದಲ್ಲಿ ಈ ಲೋಕಕ್ಕೆ ವಿದಾಯ ಹೇಳಿದ. ಈತನ ಸಮಾಧಿ ಜರ್ಮನಿ ದೇಶದಲ್ಲಿದೆ.
‘ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್’ ಮುನ್ನುಡಿ ಬರೆದ ಕನ್ನಡ ಪತ್ರಿಕಾ ರಂಗಕ್ಕೆ ಇದೀಗ ಸರಿ ಸುಮಾರು 177 ವರ್ಷಗಳೇ ಸಂದು ಹೋಗುತ್ತಿವೆ. ಇಂದಿಗೂ ಕನ್ನಡ ಪತ್ರಿಕಾ ರಂಗವು ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿ, ಸಮಾಜದ ಅಂಕು-ಡೊಂಕುಗಳ ಕೈಗನ್ನಡಿಯಾಗಿ ಸಮಾಜದ ಎಲ್ಲ ಆಗು-ಹೋಗುಗಳ ಬಗ್ಗೆ ಸ್ಪಷ್ಟ ಬೆಳಕನ್ನು ಚೆಲ್ಲುವ ಮೂಲಕ ಸಮಾಜ ಸುಧಾರಣೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.
ತಮ್ಮ ಮೂಗಿನ ನೇರಕ್ಕೆ ಸುದ್ದಿ, ಲೇಖನಗಳು ಪ್ರಕಟಗೊಳ್ಳುತ್ತಿಲ್ಲ ಹಾಗೂ ಸಮಾಜದ ಏರು-ಪೇರುಗಳನ್ನು, ಆಡಳಿತ ವರ್ಗದ ವೈಫಲ್ಯಗಳನ್ನು ಯಥಾವತ್ ಅನಾವರಣಗೊಳಿಸಲಾಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಪತ್ರಿಕೆಗಳ ಹಾಗೂ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಅಧಿಕಾರದ ಗದ್ದುಗೆಯಲ್ಲಿರುವ ಮಂದಿಗಳು ಮಾಡುತ್ತಿರುವ ಒಂದೆರಡು ಪ್ರಕರಣಗಳು ಕಂಡು ಬರುತ್ತಿದೆಯಾದರೂ ಅವೆಲ್ಲವನ್ನೂ ಯಶಸ್ವಿಯಾಗಿ ಮೆಟ್ಟಿನಿಂತು ಕನ್ನಡ ಪತ್ರಿಕಾ ರಂಗ ಇಂದಿಗೂ ತನ್ನ ಗಂಭೀರತೆಯನ್ನು, ಪ್ರಾಮುಖ್ಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಬರುತ್ತಿವೆ.
ಕನ್ನಡ ಪತ್ರಿಕಾರಂಗ 177ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಓದುಗ ಪ್ರಭುಗಳಿಗೆ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸುತ್ತಾ ಮುಂದೆಯೂ ಓದುಗರ ಬೆಂಬಲ ನಿರೀಕ್ಷೆಗೂ ಮೀರರಲಿ ಎಂಬ ಹಾರೈಕೆಯೊಂದಿಗೆ ಪತ್ರಿಕೋದ್ಯಮದ ಬಗ್ಗೆ ಸಂಕ್ಷಿಪ್ತ ಇತಿಹಾಸವನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಲಾಗಿದೆ.
ಕನ್ನಡ ಪತ್ರಿಕಾರಂಗ 177ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಓದುಗ ಪ್ರಭುಗಳಿಗೆ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸುತ್ತಾ ಮುಂದೆಯೂ ಓದುಗರ ಬೆಂಬಲ ನಿರೀಕ್ಷೆಗೂ ಮೀರರಲಿ ಎಂಬ ಹಾರೈಕೆಯೊಂದಿಗೆ ಪತ್ರಿಕೋದ್ಯಮದ ಬಗ್ಗೆ ಸಂಕ್ಷಿಪ್ತ ಇತಿಹಾಸವನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಲಾಗಿದೆ.
– ಪಿ.ಎಂ.ಎ. ಪಾಣೆಮಂಗಳೂರು.