ನವದೆಹಲಿ: ಭಾರತದಲ್ಲಿ 21ನೇ ಶತಮಾನಕ್ಕೆ ಹೋಲಿಕೆಯಾಗುವಂತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಅನುಮೋದನೆ ನೀಡಿದೆ. 34 ವರ್ಷಗಳ ಹಿಂದಿನ ಶಿಕ್ಷಣ ನೀತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಬಣ್ಣಿಸಿದ್ದಾರೆ.
1986ರಲ್ಲಿ ದೇಶದಲ್ಲಿ ಜಾರಿಗೊಳಿಸಿದ ಶಿಕ್ಷಣ ನೀತಿಯನ್ನು 1992ರಲ್ಲಿ ಪರಿಷ್ಕರಿಸಲಾಗಿದ್ದು, ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಶಿಕ್ಷಣ ಹಕ್ಕು ಕಾಯ್ದೆ 2009 ಅಡಿಯಲ್ಲಿ 3 ರಿಂದ 18 ವರ್ಷದ ವಿದ್ಯಾರ್ಥಿಗಳ ಶಾಲಾ ಶಿಕ್ಷಣ ಪಠ್ಯಕ್ರಮದಲ್ಲಿ ವಿಷಯದ ಹೊರೆ ಕಡಿಮೆಗೊಳಿಸಲಾಗಿತ್ತು.ಇದೀಗ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಮೋದನೆ ಸಿಕ್ಕಿರುವುದು ಆಧುನಿಕ ಭಾರತದಲ್ಲಿ ಹೊಸ ಶಿಕ್ಷಣ ಕ್ರಾಂತಿ ಎಂದು ಹೇಳಲಾಗುತ್ತಿದೆ. ಹೊಸ ನೀತಿಯು 'ಭಾರತವ ಜಾಗತಿಕ ಜ್ಞಾನದ ಮಹಾಶಕ್ತಿ'ಯತ್ತ ಕೊಂಡೊಯ್ಯುವ ಉದ್ದೇಶವನ್ನು ಹೊಂದಿದೆ. ಐಐಟಿ ಸೇರಿದಂತೆ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ.ಪ್ರತಿಯೊಬ್ಬ ಭಾರತೀಯರಲ್ಲಿ ದೇಶದ ಬಗ್ಗೆ ಆಳವಾದ ಹೆಮ್ಮೆಯನ್ನು ಮೂಡಿಸಬೇಕಿದೆ. ಇದರ ಜೊತೆಗೆ ಆಲೋಚನಾ ಶಕ್ತಿ, ಜ್ಞಾನ, ಸ್ಪೂರ್ತಿ, ಚೈತನ್ಯ, ಕೌಶಲ್ಯಾಭಿವೃದ್ಧಿ, ಮೌಲ್ಯ ಮತ್ತು ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಸ ಶಿಕ್ಷಣ ನೀತಿಯು ಹೊಂದಿದೆ.
ದೇಶದಲ್ಲಿ ಉನ್ನತ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸುವುದೇ ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಹೊಸ ಶಿಕ್ಷಣ ನೀತಿಯನ್ವಯ 2040ರ ವೇಳೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಶಿಸ್ತಿನ ಸಂಸ್ಥೆಗಳಾಗಿ ಬದಲಾಗಬೇಕು. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 3,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರಬೇಕು. 2030ರ ವೇಳೆಗೆ ಕನಿಷ್ಠ ಒಂದು ಜಿಲ್ಲೆಗೆ ಒಂದು ಬಹುಶಿಸ್ತಿನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ.