ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ನಿಯಂತ್ರಣದಲ್ಲಿ ವಿಶ್ವದ ದೊಡ್ಡಣ್ಣ ಅಕ್ಷರಶಃ ಕೈ ಚೆಲ್ಲಿ ಕುಳಿತಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ ಎನ್ನುವಂತೆ ನಿನ್ನೆ ಒಂದೇ ದಿನ ಅಮೆರಿಕದಲ್ಲಿ ಬರೊಬ್ಬರಿ ದಾಖಲೆಯ 47 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿವೆ.
ಮಂಗಳವಾರ ಅಮೆರಿಕದಲ್ಲಿ ಅಕ್ಷರಶಃ ಕೊರೋನಾ ಸ್ಫೋಟ ಸಂಭವಿಸಿದ್ದು, ನಿನ್ನೆ ಒಂದೇ ದಿನ ಅಮೆರಿಕದಾದ್ಯಂತ ಬೆಚ್ಚಿಬೀಳಿಸುವ ರೀತಿಯಲ್ಲಿ 47,000ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ವೈರಸ್ ಸೋಂಕು ಆರಂಭವಾದ ದಿನದಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹೊಸ ಪ್ರಕರಣಗಳು ವರದಿಯಾಗಿದೆ. ಇಷ್ಟು ದಿನ ನ್ಯೂಯಾರ್ಕ್ ಕೋವಿಡ್ 19 ಕೇಂದ್ರಬಿಂದುವಾಗಿತ್ತು. ಇದೀಗ ಕ್ಯಾಲಿಫೆÇೀರ್ನಿಯಾ, ಟೆಕ್ಷಾಸ್, ಆರಿಜೋನಾ ಗಳಲ್ಲೂ ಕೋವಿಡ್ ಅಟ್ಟಹಾಸ ಆರಂಭವಾಗಿದೆ. ಟೆಕ್ಸಾಸ್ ಮತ್ತು ಫೆÇ್ಲೀರಿಡಾ ಸೇರಿದಂತೆ ಕನಿಷ್ಠ 10 ರಾಜ್ಯಗಳಲ್ಲಿ ಜೂನ್ ತಿಂಗಳೊಂದರಲ್ಲೇ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿವೆ. ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಮರ್ಪಕ ವೈದ್ಯಕೀಯ ಸೌಲಭ್ಯ ಮತ್ತು ಹಾಸಿಗೆಗಳ ಕೊರತೆ ಕೂಡ ಕಂಡುಬರುತ್ತಿದೆ.ಅಮೆರಿಕದಲ್ಲಿ ಈ ವರೆಗೂ ಈ ಮಾರಾಣಾಂತಿಕ ವೈರಸ್ ಗೆ 1.30ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದಾರೆ. 27 ಲಕ್ಷಕ್ಕಿಂತ ಹೆಚ್ಚು ಜನರು ವೈರಾಣು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ ಅಮೆರಿಕದಲ್ಲಿ ಈ ವರೆಗೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1.3 ಲಕ್ಷಕ್ಕೇರಿಕೆಯಾಗಿದ್ದು, ನಿನ್ನೆ ಒಂದೇ ದಿನ 613 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಹೇಳಿದೆ.
ಪರಿಸ್ಥಿತಿ ಕೈ ಮೀರಿದೆ ಎಂದ ತಜ್ಞರು!
ವಿಪರ್ಯಾಸವೆಂದರೇ ಈಗಿರುವ ಪ್ರಮಾಣಕ್ಕಿಂತಲೂ ಎರಡು ಪಟ್ಟು ಅಧಿಕ ಮಂದಿ ಸೊಂಕಿಗೆ ತುತ್ತಾಗುವ ಕಾಲ ದೂರವಿಲ್ಲ ಎಂದು ಸರ್ಕಾರದ ಉನ್ನತ ಮಟ್ಟದ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಪರಿಸ್ಥಿತಿ ಕೈ ಮೀರಿದ್ದು ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೇ ಪ್ರತಿನಿತ್ಯ 1 ಲಕ್ಷ ಮಂದಿ ಸೋಂಕಿಗೆ ಭಾಧಿತರಾಗುತ್ತಾರೆ. ಇದರಿಂದ ಇಡೀ ದೇಶ ಅಪಾಯಕ್ಕೆ ತುತ್ತಾಗುತ್ತದೆ ಎಂದು ಸಾಂಕ್ರಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಸೆನೆಟ್ ಗೆ ಮಾಹಿತಿ ನೀಡಿದ್ದಾರೆ.