ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಲಾಕ್ ಡೌನ್ ನಿಂದ ತತ್ತರಿಸಿರುವ ಭಾರತದ ಆರ್ಥಿಕತೆ ಸುಧಾರಣೆಗೆ 50 ರಿಂದ 60 ಲಕ್ಷ ಕೋಟಿ ನೇರ ವಿದೇಶಿ ಬಂಡವಾಳ ಹೂಡಿಕೆಯ ಅಗತ್ಯ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ.
ಭಾರತಕ್ಕೆ 50 ರಿಂದ 60 ಲಕ್ಷ ಕೋಟಿ ರೂ.ಗಳ ವಿದೇಶಿ ನೇರ ಹೂಡಿಕೆಯ ಅಗತ್ಯವಿದೆ ಮತ್ತು ಈ ಹಣವನ್ನು ಮುಖ್ಯವಾಗಿ ಮೂಲಸೌಕರ್ಯ ಯೋಜನೆಗಳು ಹಾಗೂ ಎಂಎಸ್‍ಎಂಇ ವಲಯದ ಮೂಲಕ ಕರೋನಾ ವೈರಸ್ ಬಾಧಿತ ಆರ್ಥಿಕತೆಯ ಚಕ್ರಗಳನ್ನು ವೇಗಗೊಳಿಸಲು ಬಳಸಬಹುದು ಎಂದು ಗಡ್ಕರಿ ತಿಳಿಸಿದ್ದಾರೆ. ಈ ಸಮಯದಲ್ಲಿ ವಿದೇಶಿ ನೇರ ಹೂಡಿಕೆ(ಎಫ್‍ಡಿಐ)ಯ ಅವಶ್ಯಕತೆ ಇದೆ ಎಂದು ಒತ್ತಿಹೇಳಿದ ಹಿರಿಯ ಸಚಿವ ಗಡ್ಕರಿ, ಈ ಹಣವು ದೇಶಕ್ಕೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಗಮನಾರ್ಹವಾಗಿ ಅಸ್ತವ್ಯಸ್ತಗೊಂಡಿವೆ ಎಂದಿದ್ದಾರೆ.
"ಈ ಹಂತದಲ್ಲಿ ದೇಶಕ್ಕೆ ಹಣದ ಹರಿವು ಬೇಕು. ಹಣದ ಹರಿವು ಇಲ್ಲದೆ ನಮ್ಮ ಆರ್ಥಿಕತೆಯ ಚಕ್ರ ವೇಗವಾಗುವುದಿಲ್ಲ. ಆರ್ಥಿಕತೆಯನ್ನು ಹೆಚ್ಚಿಸಲು ಪ್ರಸ್ತುತ ಸಂದರ್ಭಗಳಲ್ಲಿ ದೇಶದಲ್ಲಿ 50-60 ಲಕ್ಷ ಕೋಟಿ ರೂ. ವಿದೇಶಿ ಹೂಡಿಕೆಯ ಅಗತ್ಯವಿದೆ" ಎಂದು ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್‍ಎಂಇ ಸಚಿವ ನಿತಿನ್ ಗಡ್ಕರಿ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.