ಕುಂಬಳೆ: ಸ್ಥಳೀಯ ಜೈವ ವೈವಿಧ್ಯಗಳನ್ನು ಸಂರಕ್ಷಿಸುವ ಮಹೋನ್ನತ ಕನಸುಗಳೊಂದಿಗೆ ಕುಂಬಳೆ ಗ್ರಾ.ಪಂ. ನೇತೃತ್ವದಲ್ಲಿ ಜಾರಿಗೊಳ್ಳುವ "ಹಸಿರು ವನ" ಯೋಜನೆಯ ಭಾಗವಾಗಿ ಕೊಡ್ಯಮೆ ಸರ್ಕಾರಿ ಹೈಸ್ಕೂಲು ಆವರಣದಲ್ಲಿ ಫಲಪುಷ್ಪ, ಔಷಧಿ ಸಸಿಗಳನ್ನು ನೆಟ್ಟು ಬೆಳೆಸಲು ಇತ್ತೀಚೆಗೆ ಚಾಲನೆ ನೀಡಲಾಯಿತು.
ತರಕಾರಿ ಬೆಳೆಗಳು, ಬಾಳೆ ಮೊದಲಾದ ತರಕಾರಿ ಕೃಷಿ ನಿರ್ವಹಣೆಗೆ ಶಾಲಾ ರಕ್ಷಕ ಶಿಕ್ಷಕ ಸಂಘವೂ ಮುಂದಾಗುತ್ತಿದೆ. 2013ರಲ್ಲಿ ಅರಣ್ಯ ಇಲಾಖೆಯಿಂದ ಶಾಲೆಗೆ ಮೂರು ಎಕ್ರೆ ನಿವೇಶನ ಲಭ್ಯವಾಗಿತ್ತು. ಈ ವೇಳೆ ಯಾವುದೇ ಮರಗಳನ್ನೂ ಕಡಿಯ ಬಾರದು ಮತ್ತು ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವವವನ್ನು ಕಲಿಸುವ ಉದ್ದೇಶದಿಂದ 15 ಸೆಂಟ್ ಭೂಮಿಯಲ್ಲಿ ಅರಣ್ಯೀಕರಣದ ಯೋಜನೆಗೂ ರೂಪು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕುಂಬಳೆ ಗ್ರಾ.ಪ.ನೇತೃತ್ವದಲ್ಲಿ ವನಮಹೋತ್ಸವದ ಸಂದರ್ಭ ಅರಣ್ಯೀಕರಣ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಸಸಿಗಳನ್ನು ನೆಟ್ಟು ಜೈವ ಗೊಬ್ಬರಗಳನ್ನು ಹಾಕಿ ಸಸಿಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲಾಗಿತ್ತು. ಉದ್ಯೋಗ ಖಾತರೀ ಯೋಜನೆಯ ಮೂಲಕ ಸಸಿ ನೆಡುವ ವ್ಯವಸ್ಥೆಗಳನ್ನೂ ಮಾಡಲಾಗಿತ್ತು.
ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಕೊಡ್ಯಮೆ, ಮುಖ್ಯೋಪಾಧ್ಯಾಯ ಮನೋಜ್, ಸ್ಥಳೀಯರಾದ ಅಬ್ಬಾಸ್ ಅಲಿ ಕೆ, ಪಿ.ಬಿ.ಅಬ್ದುಲ್ ಖಾದರ್, ಪದ್ಮನಾಭನ್ ಬ್ಲಾತೂರ್, ಅಬ್ದುಲ್ಲ ಇಚ್ಲಂಪಾಡಿ, ರಾಜು ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಸಿರು ವನ ಯೋಜನೆಯ ಭಾಗವಾಗಿ ಕೊಡ್ಯಮೆ ಅಲ್ಲದೆ ಕಿದೂರು ಕುಂಟಂಗೇರಡ್ಕ ಪರಿಸರದಲ್ಲಿ ಫಲಪುಷ್ಪ ಹಾಗೂ ಔಷಧಿ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ ಅನುಷ್ಠಾನಗೊಳ್ಳಲಿದೆ.