ನವದೆಹಲಿ: ಹರಿಯಾಣದ ಅಂಬಾಲ ವಾಯುನೆಲೆಗೆ ಫ್ರಾನ್ಸ್ ನಿಂದ ಬಂದಿಳಿದಿರುವ ಮೊದಲ ತಂಡದ 5 ರಫೇಲ್ ಯುದ್ಧ ವಿಮಾನಗಳನ್ನು ಬುಧವಾರ ಸ್ವಾಗತಿಸಿರುವ ಪ್ರಧಾನ ಮಂತ್ರಿ ನರೇಂದ್ರಮೋದಿ, ಸಂಸ್ಕೃತದಲ್ಲಿ ಟ್ವೀಟ್ ಮಾಡಿ ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಪುಣ್ಯವಿಲ್ಲ; ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಉಪವಾಸವಿಲ್ಲ; ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಕೆಲಸ ಇನ್ನೊಂದಿಲ್ಲ ಎಂದು ಸಂಸ್ಕೃತದಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಅಂಬಾಲ ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಿರುವ ವಿಡಿಯೋವನ್ನು ಸಹ ಪ್ರಧಾನಿ ಮೋದಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಫ್ರಾನ್ಸ್ ನಲ್ಲಿ ನಿರ್ಮಾಣಗೊಂಡ ಬಹು ಪಾತ್ರ ನಿರ್ವಹಿಸುವ ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಗೆ ಬಂದಿಳಿದಾಗ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭೌದೂರಿಯಾ ಸ್ವಾಗತಿಸಿದರು.
ಫ್ರೆಂಚ್ ಬಂದರು ನಗರವಾದ ಬೋರ್ಡೆಕ್ಸ್ ನ ಮೆರಿಗ್ನಾಕ್ ವಾಯುನೆಲೆದಿಂದ 7,೦೦೦ ಕಿ.ಮೀ ದೂರ ಕ್ರಮಿಸಿದ ನಂತರ ವಿಮಾನಗಳು ಅಂಬಾಲಾ ವಾಯುಪಡೆಯ ನೆಲೆಗೆ ಬಂದಿಳಿದವು. ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪ್ರದೇಶ ಪ್ರವೇಶಿದ ತಕ್ಷಣ ಎರಡು ಸುಖೋಯ್ ಎಂಕೆಐ ವಿಮಾನಗಳು ಬೆಂಗಾವಲು ಕಲ್ಪಿಸಿದವು.
ಲೋಹದ ಹಕ್ಕಿಗಳು ಸುರಕ್ಷಿತ ವಾಗಿ ಅಂಬಾಲಾ ವಾಯು ನೆಲೆಗೆ ಬಂದಿಳಿದಿವೆ ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಯಿಂದ ಭಾರತೀಯ ವಾಯುಪಡೆಯ ಸಾಮರ್ಥ್ಯಗಳಲ್ಲಿ ಕ್ರಾಂತಿ ಉಂಟಾಗಲಿದೆ ಎಂದಿರುವ ರಕ್ಷಣಾ ಸಚಿವರು ರಫೇಲ್ ಯುದ್ಧ ವಿಮಾನಗಳ ಮೊದಲ ತಂಡ ಆಗಮನದೊಂದಿಗೆ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯೊಡ್ಡಲು ಪ್ರಯತ್ನಿಸುವ ಶತ್ರು ದೇಶಗಳು ಭಯಪಡುವಂತಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಲೋಹ ಹಕ್ಕಿಗಳು ಅಂಬಾಲಾದಲ್ಲಿ ಸುರಕ್ಷಿತವಾಗಿ ಇಳಿದಿವೆ. ಭಾರತದಲ್ಲಿ ರಫೆಲ್ ಯುದ್ಧ ವಿಮಾನಗಳ ಪಾದಾರ್ಪಣೆಯು ದೇಶದ ಸೇನಾ ಇತಿಹಾಸದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಬಹುಪಾತ್ರದ ಈ ವಿಮಾನಗಳು ಭಾರತೀಯ ವಾಯುಪಡೆ ಸಾಮರ್ಥ್ಯಗಳಲ್ಲಿ ಕ್ರಾಂತಿಯನ್ನುಂಟುಮಾಡಲಿವೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಕೊವಿಡ್ ನಿಂದ ಎದುರಾದ ತೀವ್ರವಾದ ನಿರ್ಬಂಧಗಳ ಹೊರತಾಗಿಯೂ, ವಿಮಾನ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ನಿಗದಿತ ಸಮಯದಲ್ಲಿ ತಲುಪಿಸಿರುವುದಕ್ಕೆ ಫ್ರಾನ್ಸ್ ಸರ್ಕಾರ, ಡಸಾಲ್ಟ್ ಏವಿಯೇಷನ್ ಮತ್ತು ಇತರ ಫ್ರೆಂಚ್ ಕಂಪನಿಗಳಿಗೆ ರಾಜನಾಥ್ ಸಿಂಗ್ ಧನ್ಯವಾದ ಅರ್ಪಿಸಿದ್ದಾರೆ.https://twitter.com/narendramodi/status/1288425006209228800?s=19