ಕಾಸರಗೋಡು: ಇಂಡಿಯನ್ ಆಯಿಲ್ ಕಾರ್ಪರೇಷನ್ ಸಂಸ್ಥೆ ಜೈಲುಗಳಲ್ಲಿ ನಿರ್ಮಿಸುವ ಪೆಟ್ರೋಲಿಯಂ ಔಟ್ ಲೆಟ್ ಗಳ ರಾಜ್ಯ ಮಟ್ಟದ ಚಟುವಟಿಕೆಗಳ ಉದ್ಘಾಟನೆ ಗುರುವಾರ ಜರಗಿತು.
ಚೀಮೇನಿ ತೆರೆದ ಜೈಲು, ಕಣ್ಣೂರು, ವಿಯ್ಯೂರು, ತಿರುವನಂತಪುರಂ ಕೇಂದ್ರ ಕಾರಾಗೃಹ ಗಳಲ್ಲಿ ಮೊದಲ ಹಂತದ ಯೋಜನೆಯ ಕಮೀಷನ್ ನಡೆದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ ಲೈನ್ ಮೂಲಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿದರು.
ಈ ಯೋಜನೆಯ ಆರಂಭದೊಂದಿಗೆ ಸುಮಾರು 15 ಖೈದಿಗಳಿಗೆ ಪ್ರತಿ ಪಂಪ್ ಗಳಲ್ಲಿ ನೌಕರಿ ಲಭ್ಯತೆ ಸಾಧ್ಯವಾಗಲಿದೆ. ಸಾರ್ವಜನಿಕರಿಗೆ ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಇಂಧನ ಸೂಕ್ತ ಅಳತೆಯಲ್ಲೇ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಪೆಟ್ರೋಲ್ ಪಂಪುಗಳ ಜೊತೆಯಲ್ಲೇ ರಾಜ್ಯ ಸರಕಾರದ ಪಬ್ಲಿಕ್ ಕಂಫರ್ಟ್ ಸೇಷನ್ ಗಳ ಚಟುವಟಿಕೆಯೂ ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ಚೀಮೇನಿಯ ಮುಕ್ತ ಸೆರೆಮನೆಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕ ಎಂ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ಅಧ್ಯಕ್ಷೆ ಕೆ.ಶಕುಂತಲಾ, ಸ್ಥಾಯೀ ಸಮಿತಿ ಅಧ್ಯಕ್ಷೆ ಎಂ.ಗೀತಾ, ವಾರ್ಡ್ ಸದಸ್ಯ ಸುಭಾಷ್ ಆರುಕರ, ಇಂಡಿಯನ್ ಆಯಿಲ್ ಕಾರ್ಪರೇಷನ್ ಸೇಲ್ಸ್ ಡಿವಿಝನಲ್ ಮೆನೆಜರ್ ಟಿಟ್ಟೋ ಜೋಸ್ ಉಪಸ್ಥಿತರಿದ್ದರು.