ನವದೆಹಲಿ: ಚೀನಾದ ಹಿಂಸಾತ್ಮಕ ಸಂಘರ್ಷದ ಬಳಿಕ ಒಂದೆಡೆ ಭಾರತ- ಚೀನಾ ಸೇನಾಧಿಕಾರಿಗಳ ನಡುವೆ ನಿರಂತರವಾಗಿ ಮಾತುಕತೆ ನಡೆಯುತ್ತಲೇ ಇದೆ. ಇನ್ನೊಂದೆಡೆ, ಎರಡೂ ದೇಶಗಳು ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸೇನೆಯನ್ನು ಜಮಮಾಯಿಸುತ್ತಲೇ ಇವೆ.
ಈ ನಡುವೆ, ಅಚ್ಚರಿಯೆಂಬಂತೆ ಉತ್ತರ ಲಡಾಖ್ ಗಡಿಗೆ ಹೊಂದಿಕೊಂಡಿರುವ ಗಿಲ್ಗಿಟ್- ಬಲ್ಟಿಸ್ತಾನ್ನಲ್ಲಿ ಪಾಕಿಸ್ತಾನ ಕೂಡ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ. ಪಾಕಿಸ್ತಾನದ 20 ಸಾವಿರಕ್ಕೂ ಅಧಿಕ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಇದರಲ್ಲಿ ಚೀನಾ ಕೈವಾಡ ಇದ್ದೇ ಇರಲಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಚೀನಾ, ಪಾಕಿಸ್ತಾನದ ಉಗ್ರರೊಂದಿಗೆ ನೇರವವಾಗಿ ಚರ್ಚೆಗೆ ಇಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರದಲ್ಲಿ ತೊಡಗುವಂತೆ ಕುಮ್ಮಕ್ಕು ನೀಡುತ್ತಿದೆ.
ಉಗ್ರ ಸಂಘಟನೆ ಅಲ್ ಬದರ್ ಜತೆ ಚೀನಾ ಮಾತುಕತೆಯಲ್ಲಿ ತೊಡಗಿದ್ದು, ಭಾರತದಲ್ಲಿ ಹಿಂಸಾಚಾರ ನಡೆಸುವಂತೆ ಸೂಚಿಸಿದೆ. ಚೀನಾ ಜತೆ ಸೇರಿಕೊಂಡು ಭಾರತದ ಮೇಲೆ ದಾಳಿ ನಡೆಸುವ ಉದ್ದೇಶ ಪಾಕಿಸ್ತಾನದ್ದಾಗಿದೆ. ಚೀನಾದ ಕುಮ್ಮಕ್ಕಿನಿಂದಾಗಿಯೇ ಯುದ್ದೋನ್ಮಾದ ಉಗ್ರರನ್ನು ಭಾರತಕ್ಕೆ ನುಸುಳುವಲ್ಲಿ ಪಾಕಿಸ್ತಾನದ ಐಎಸ್ಐ ಸಜ್ಜಾಗಿದೆ.
ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಉಗ್ರರಿಂದ ಆಂತರಿಕವಾಗಿಯೇ ದಾಳಿ ನಡೆಸುವ ಉದ್ದೇಶ ಐಎಸ್ಐನದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 120ಕ್ಕೂ ಅಧಿಕ ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಇವರಲ್ಲಿ 100ಕ್ಕೂ ಅಧಿಕ ಜನರು ಸ್ಥಳೀಯರೇ ಆಗಿದ್ದಾರೆ ಎಂಬುದು ಆತಂಕದ ವಿಷಯ.