ಫ್ಲೊರಿಡಾ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ವತಿಯಿಂದ ಶೀಘ್ರದಲ್ಲಿಯೇ ಇನ್ನೊಂದು ಇತಿಹಾ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದಾಗಲೇ ವಿಜ್ಞಾನಿಗಳು, ಬಾಹ್ಯಾಕಾಶ ಸಂಶೋಧಕರಿಗೆ ಕೇಂದ್ರಬಿಂದುವಾಗಿರುವ ಮಂಗಳ ಗ್ರಹದ ಬಗ್ಗೆ ಸಂಶೋಧನೆಗಳನ್ನು ನಡೆಯುತ್ತಲೇ ಇದೆ.
ಅಗೆದಷ್ಟು, ಬಗೆದಷ್ಟು ಕುತೂಹಲದ ತಾಣವಾಗಿರುವ ಮಂಗಳನ ಬಗ್ಗೆ ತಜ್ಞರು ಇನ್ನಿಲ್ಲದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಅದರ ಇನ್ನೊಂದು ಭಾಗವೇ ಪರ್ಸೆವೆರನ್ಸ್’. ಮಂಗಳ ಗ್ರಹದಲ್ಲಿ ಜೀವ ಜಗತ್ತಿನ ಇರುವಿಕೆಯ ಹುಡುಕಾಟದಲ್ಲಿ ಇರುವ ನಾಸಾದಿಂದ ಈಗ ಇನ್ನೊಂದು ಹೊಸ ಪ್ರಯತ್ನ ನಡೆಯುತ್ತಿದೆ. ಫ್ಲೊರಿಡಾದ ಕೇಪ್ ಕ್ಯಾನವರಲ್ ಸ್ಟೇಷನ್‌ನಿಂದ ಇಂದು ‘ಪರ್ಸೆವೆರೆನ್ಸ್’ ರೋವರ್ ಹೊತ್ತ ರಾಕೆಟ್ ಉಡಾವಣೆಯಾಗಿದೆ.
ಒಂದು ಕಾರಿನ ಗಾತ್ರದ ಆರು ಗಾಲಿಗಳಿರುವ ರೋವರ್ ಮಂಗಳನ ಕುಳಿಯಲ್ಲಿ ಇಳಿದು, ಅಲ್ಲಿ ಇದ್ದಿರಬಹುದಾದ ಸೂಕ್ಷ್ಮಾಣು ಜೀವಿಗಳ ಕುರುಹುಗಳ ಹುಡುಕಾಟ ನಡೆಸಲಿದೆ ಎಂದು ನಾಸಾ ಹೇಳಿದೆ. ಅಲ್ಲಿನ ವಾತಾವರಣದ ಮಾಹಿತಿ, ನೆಲದ ಮಣ್ಣು ಮತ್ತು ಕಲ್ಲಿನ ಚೂರುಗಳನ್ನು ಸಂಗ್ರಹಿಸುವುದು ಇದರ ಕೆಲಸ. ಇದರಿಂದಾಗಿ ಮಂಗಳದಲ್ಲಿ ಜೀವ ಇರುವಿಕೆಯ ಕುರಿತಂತೆ ಇನ್ನಷ್ಟು ಸಂಶೋಧನೆಗೆ ಸಹಕಾರಿಯಾಗಲಿದೆ ಎಂದಿದೆ.
ಅಟ್ಲಾಸ್ 5 ರಾಕೆಟ್ ಮೂಲಕ 2.4 ಬಿಲಿಯನ್ ಡಾಲರ್ (ಸುಮಾರು 17,978 ಕೋಟಿ ರೂಪಾಯಿ) ಮೊತ್ತದ ಮಿಷನ್‌ನ ಮೊದಲ ಹಂತ ಇದಾಗಲೇ ಯಶಸ್ವಿಯಾಗಿದ್ದು, ಅದರ ಮುಂದುವರಿದ ಭಾಗವಿದು.
ಪರ್ಸೆವೆರನ್ಸ್ ಹೆಸರಿನ ರೊಬಾಟಿಕ್ ರೋವರ್ ಮಂಗಳನ ಅಂಗಳದಲ್ಲಿ ಇಳಿದು ಶೋಧ ಕಾರ್ಯ ನಡೆಸಲಿದೆ. ರೋವರ್ ಫೆಬ್ರವರಿಯಲ್ಲಿ ಮಂಗಳನ ಅಂಗಳ ತಲುಪುವುದಾಗಿ ನಿರೀಕ್ಷಿಸಲಾಗಿದ್ದು, ರೋವರ್ ತನ್ನ ಜತೆಗೆ ಒಂದು ಪುಟ್ಟ ಹೆಲಿಕಾಪ್ಟರ್‌ನ್ನು ಕಾರ್ಯಾಚರಣೆಗೆ ಇಳಿಸಲಿದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.