ಉಪ್ಪಳ: ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಣ್ಣು ಹಾಕಿ ಮುಚ್ಚಿದ ಬಳಿಕ ಗಡಿ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.
ಜು.4 ರಿಂದ ಪಾಸ್ ಇಲ್ಲ:
ಮಂಗಳೂರು ಸಹಿತ ಇತರ ರಾಜ್ಯಗಳಿಗೆ ತೆರಳುವವರಿಗೆ ಪ್ರಸ್ತುತ ನೀಡಲಾಗುವ ದೈನಂದಿನ ಪಾಸ್ ಜು.4 ರಿಂದ ಹೊಸತಾಗಿ ನೀಡಲಾಗುವುದಿಲ್ಲ ಎಂದು ಡಿಸಿ ತಿಳಿಸಿರುವರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮರಸ ಸುದ್ದಿಯೊಂದಿಗೆ ಸ್ಪಷ್ಟನೆ ನೀಡಿದ್ದು, ಸರ್ಕಾರ ಈ ಬಗ್ಗೆ ಸೂಚಿಸಿದ್ದು ಹೌದಾದರೂ ಈವರೆಗೆ ಅಧಿಕೃತ ಸುತ್ತೋಲೆ ಬಂದಿಲ್ಲ. ಗುರುವಾರ ಸುತ್ತೋಲೆ ಲಭ್ಯವಾಗುವ ಸಾಧ್ಯತೆ ಇದೆ ಎಂದಿರುವರು.
ಮಂಗಳವಾರ ಬಾಯಾರು ಪ್ರದೇಶದ ಅಂತರ್ ರಾಜ್ಯ ಗಡಿಗಳನ್ನು ಮುಚ್ಚಿದ ಬೆನ್ನಲ್ಲೇ ಬುಧವಾರ ಜಿಲ್ಲೆಯ ಇತರ ಗಡಿ ಗ್ರಾಮಗಳಲ್ಲಿ ಪೋಲೀಸರು ಹಾಗೂ ಆರೋಗ್ಯ ಇಲಾಖೆ ಚುರುಕಾಗಿದ್ದು ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕರ್ನಾಟಕದಿಂದ ಯಾರೊಬ್ಬರನ್ನೂ ಕೇರಳದೊಳಕ್ಕೆ ಬಿಡಬಾರದೆಂದು ತಾಕೀತು ಮಾಡಿರುವರು. ಎಣ್ಮಕಜೆ ಗ್ರಾ.ಪಂ.ನ ಅಡ್ಕಸ್ಥಳ, ಸ್ವರ್ಗ, ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಕಿನ್ನಿಂಗಾರು, ನೆಟ್ಟಣಿಗೆ, ದೇಲಂಪಾಡಿಯ ಜಾಲ್ಸೂರು, ಕಲ್ಲಪ್ಪಳ್ಳಿ, ವರ್ಕಾಡಿ ಪಂಚಾಯತಿ ವ್ಯಾಪ್ತಿಯ ಆನೆಕಲ್ಲು, ತೌಡುಗೋಳಿ, ಪೈವಳಿಕೆಯ ಬೇಡಗುಡ್ಡೆ, ಸುಂಕದಕಟ್ಟೆ ಮೊದಲಾದೆಡೆ ಆರೋಗ್ಯ ಇಲಾಖೆ ಹಾಗೂ ಪೋಲೀಸರು ಎಚ್ಚರಿಕೆ ನೀಡಿದ್ದು ಗ್ರಾಮೀಣ ರಸ್ತೆಗಳ ಮುಚ್ಚುವಿಕೆಯನ್ನು ಖಾತರಿಪಡಿಸಿರುವರು.
ಕೋವಿಡ್ ನಿಯಂತ್ರಣ ವಿಧೇಯಕಗಳನ್ನು ಮೀರಿ ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆಗಳಿಗೆ ಅನಧಿಕೃತವಾಗಿ ಹೋಗಿ-ಬರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮತ್ತು ದ.ಕ.ಜಿಲ್ಲೆಯ ಗಂಭೀರ ಕೊರೊನಾ ಅಟ್ಟಹಾಸದಿಂದ ಮುಂಜಾಗ್ರತಾ ಕ್ರಮದ ಭಾಗವಾಗಿ ಇಂತಹ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಯಿತು.
ಕೋವಿಡ್ ಹಿನ್ನಲೆಯ ಲಾಕ್ ಡೌನ್ ಹೇರಿಕೆಯ ಆರಂಭ ಸಂದರ್ಭ ಕಾಸರಗೋಡು ಖಳನಾಯಕ ಜಿಲ್ಲೆಯಾಗಿ ಗುರುತಿಸಲ್ಪಟ್ಟ ವೇಳೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ ಸಂಪರ್ಕಿಸುವ ರಸ್ತೆಗಳನ್ನು ಹಠಾತ್ ಬಂದ್ ಮಾಡಿತ್ತು.
ಚೆರ್ಕಳ ಕಲ್ಲಡ್ಕ ರಾಜ್ಯ ಹೆದ್ದಾರಿಯ ಬಂಟ್ವಾಳ ತಾಲೂಕು ಕೇಪು ಗ್ರಾ.ಪಂ ವ್ಯಾಪ್ತಿಯ ಸಾರಡ್ಕ ಚೆಕ್ ಪೆÇೀಸ್ಟ್ ಹಾಗೂ ಪಾಣಾಜೆಯ ಚೆಕ್ ಪೆÇಸ್ಟ್, ದೇಲಂಪಾಡಿ ಸುಳ್ಯ ಮಧ್ಯೆಯ ಜಾಲ್ಸೂರು ಚೆಕ್ ಪೋಸ್ಟ್ ತೆರವುಗೊಳಿಸುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ಸ್ ಪಕ್ಷಗಳು ನಾಟಕೀಯ ಬೆಳವಣಿಗೆಗಳನ್ನು ನಡೆಸುತ್ತಿರುವ ಮಧ್ಯೆ ಜಿಲ್ಲಾಡಳಿತ ಕರ್ನಾಟಕ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿರುವುದು ತೀವ್ರ ಕಳವಳ ಹಾಗೂ ಗಡಿನಾಡಿನ ಜನರ ಅತಂತ್ರತೆಯ ಮುಂದುವರಿಕೆಯ ಕರಾಳತೆಗೆ ಸಾಕ್ಷಿಯಾಗುತ್ತಿದೆ.