ತಿರುವನಂತಪುರ: ಚಿನ್ನದ ಕಳ್ಳಸಾಗಣೆ ಪ್ರಕರಣ ನಿರ್ಣಾಯಕ ಹಂತದಲ್ಲಿದ್ದಾಗ ಕಸ್ಟಮ್ಸ್ ತನಿಖೆಯ ಉಸ್ತುವಾರಿ ಅಧಿಕಾರಿಯನ್ನು ಸ್ಥಳಾಂತರಿಲಾಗಿದೆ. ಇದು ಪ್ರಕರಣ ದಿಕ್ಕನ್ನು ಬದಲಾಯಿಸುವ ಯತ್ನ ಎಮದು ಆರೋಪಿಸಲಾಗಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದ ಕಸ್ಟಮ್ಸ್ ಜಂಟಿ ಆಯುಕ್ತ ಅನೀಶ್ ರಾಜನ್ ಅವರ ಅನಿರೀಕ್ಷಿತ ವರ್ಗಾವಣೆ ಪ್ರಕರಣ ತನಿಖೆಯ ದಿಕ್ಕನ್ನು ತಪ್ಪಿಸಿ ಒಟ್ಟು ಪ್ರಕರಣವನ್ನು ಬುಡಮೇಲುಗೊಳಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ತನಿಖೆಯ ನಿರ್ಣಾಯಕ ಹಂತದಲ್ಲಿ ಹಿರಿಯ ಅಧಿಕಾರಿಯ ವರ್ಗಾವಣೆಯ ಬಗ್ಗೆ ಒಂದು ವಿಭಾಗದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕಸ್ಟಮ್ಸ್ ಆಯುಕ್ತರಿಗೆ ಮಾಹಿತಿ ನೀಡಿದರು.
ದಕ್ಷತೆಗೆ ಹೆಸರುವಾಸಿಯಾದ ಅಧಿಕಾರಿ:
ದೇಶದ ಅತ್ಯುತ್ತಮ ಕಸ್ಟಮ್ಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಕರೆಯಲ್ಪಡುವ ಅನೀಶ್ ರಾಜನ್ ಅವರನ್ನು ಬ್ರಸೆಲ್ಸ್ ಮೂಲದ ವಿಶ್ವ ಕಸ್ಟಮ್ಸ್ ಸಂಸ್ಥೆ ಭಾರತದ ಅತ್ಯುತ್ತಮ ಕಸ್ಟಮ್ಸ್ ಅಧಿಕಾರಿಯಾಗಿ ಆಯ್ಕೆ ಮಾಡಿದೆ. ಕೊಚ್ಚಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅನೀಶ್ ಪಿ ರಾಜನ್ ಅವರ ನೇತೃತ್ವದಲ್ಲಿ 1,400 ಕ್ಕೂ ಹೆಚ್ಚು ಚಿನ್ನದ ಕಳ್ಳಸಾಗಾಣಿಕೆದಾರರನ್ನು ಬಂಧಿಸಲಾಗಿದೆ. 2008 ರ ಬ್ಯಾಚ್ ಅಧಿಕಾರಿಯಾಗಿದ್ದ ಅನೀಶ್ ಅವರಿಗೆ ಜನವರಿಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಜ್ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದ್ದರು.
ಸ್ಥಳಾಂತರಕ್ಕೆ ಸಮರ್ಥ ಕಾರಣಗಳಿಲ್ಲ:
ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿ ಅಗತ್ಯತ ಸಮರ್ಥನೀಯ ವಿವರಣೆಯನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ. ನಾಲ್ಕು ವಿಮಾನ ನಿಲ್ದಾಣಗಳು ಮತ್ತು ಒಂದು ಬಂದರು ವ್ಯಾಪ್ತಿಯ ಉಸ್ತುವಾರಿ ಅಧಿಕಾರಿಯನ್ನು ವರ್ಗಾಯಿಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ. ಇಲಾಖೆಗಳಿಗೆ ಸಾಮಾನ್ಯವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸ್ವಾತಂತ್ರ್ಯವಿದೆ. ಆದರೆ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪವಿದ್ದರೆ ನ್ಯಾಯಾಲಯಗಳು ಮಧ್ಯಪ್ರವೇಶಿಸುತ್ತವೆ ಎಂದು ವಿಶ್ಲೇಶಿಸಲಾಗಿದೆ.
ತನಿಖೆಯ ದಿಕ್ಕನ್ನು ಬೇರೆಡೆಗೆ ತಿರುಗಿಸುವ ಯತ್ನ?:
ಕೆಲವು ವರದಿಗಳ ಪ್ರಕಾರ, ಚಿನ್ನ ಸಾಗಣಿಕೆ ಪ್ರಕರಣದ ತನಿಖೆ ಬಿಜೆಪಿ ಬೆಂಬಲಿಗನ ಮೇಲೆ ನಿಂತಿರುವುದರಿಂದ ಅಧಿಕಾರಿಯನ್ನು ವರ್ಗಾಯಿಸಲಾಗಿದೆ ಎನ್ನಲಾಗಿದೆ. ಚಿನ್ನ ಸಾಗಣಿಕಾ ಏಜೆಂಟ್ ಹರಿರಾಜ್ ಅವರನ್ನು ಕಸ್ಟಮ್ಸ್ ಗುರುವಾರ ಪ್ರಶ್ನಿಸಿತ್ತು. ಈತನನ್ನು ಕೇರಳದ ಮಾಧ್ಯಮಗಳು ಸಂಘ ಪರಿವಾರದ ವ್ಯಕ್ತಿಯೆಂದು ವರದಿ ಮಾಡಿದ್ದವು. ಕಳ್ಳಸಾಗಣೆ ಮಾಡಿದ ಚಿನ್ನ ತುಂಬಿದ ರಾಜತಾಂತ್ರಿಕ ಸಾಮಾನುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಕಸ್ಟಮ್ಸ್ ಗೆ ಕರೆ ಮಾಡಿದ್ದಾಗಿ ಹರಿರಾಜ್ ಗುರುವಾರದ ವಿಚಾರಣೆ ವೇಳೆ ತಪೆÇ್ಪಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹರಿರಾಜ್ ಅವರನ್ನು ಪ್ರಶ್ನಿಸಲು ನೋಟಿಸ್ ನೀಡಿದ ಅಲ್ಪಹೊತ್ತಲ್ಲೇ ಅನೀಶ್ ಪಿ ರಾಜನ್ ಅವರನ್ನು ವರ್ಗಾವಣೆ ಮಾಡಲಾಗಿರುವುದು ಗಂಭೀರತೆಯ ನಿದರ್ಶನವಾಗಿದೆ. ಕಸ್ಟಮ್ಸ್ ವಶದಲ್ಲಿದ್ದ ವಸ್ತುಗಳನ್ನು ತಲುಪಿಸಲು ಸಾಧ್ಯವಾಗದಿದ್ದರೆ, ಅದನ್ನು ಯುಎಇಗೆ ಕಳುಹಿಸಬೇಕು ಮತ್ತು ಪರಿಶೀಲಿಸಬಾರದು ಎಂದು ಕ್ಲಿಯರಿಂಗ್ ಏಜೆಂಟ್ ಹೇಳಿದ ಬಳಿಕ ತಾನು ಕಸ್ಟಮ್ಸ್ ಗೆ ಕರೆ ಮಾಡಿದ್ದು ಹೌದು ಎಂದು ಹರಿರಾಜ್ ಗುರುವಾರದ ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ ಲಗೇಜ್ ತೆರೆದು ಪರಿಶೀಲಿಸಿದಾಗ ಸುಮಾರು 30 ಕೆಜಿ ಚಿನ್ನ ಪತ್ತೆಯಾಗಿದೆ. ಕೊಚ್ಚಿ ಮತ್ತು ತಿರುವನಂತಪುರ ದಲ್ಲಿರುವ ಹರಿರಾಜ್ ಅವರ ಮನೆಗಳ ಮೇಲೆ ಕಸ್ಟಮ್ಸ್ ದಾಳಿ ನಡೆಸಿತ್ತು.
'ಸಿಎಂ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ':
ತನ್ನ ರಾಜತಾಂತ್ರಿಕ ಸರಂಜಾಮುಗಳನ್ನು ಬಿಡುಗಡೆ ಮಾಡುವಂತೆ ಕೇಳಿ ಮುಖ್ಯಮಂತ್ರಿ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ ಎಂದು ಅನೀಶ್ ಪಿ ರಾಜನ್ ಮಾಧ್ಯಮಗಳಿಗೆ ಬಹಿರಂಗವಾಗಿ ತಿಳಿಸಿದ್ದರು. ಆದರೆ, ಅವರು ಎಡಪಂಥೀಯ ಕುಟುಂಬಕ್ಕೆ ಸೇರಿದವರು ಮತ್ತು ಮುಖ್ಯಮಂತ್ರಿ ಕಚೇರಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಆರೋಪಿಸಿತ್ತು. ಇದರ ನಂತರವೇ ಅನೀಶ್ ರಾಜನ್ ಅವರನ್ನು ಸ್ಥಳಾಂತರಿಸುವ ಆದೇಶ ಹೊರಬಂದಿತು. ಮುಖ್ಯಮಂತ್ರಿಯ ಮಾಜಿ ಮುಖ್ಯ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಚಿನ್ನದ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದು ಎನ್‍ಐಎ ತನಿಖೆಯಲ್ಲಿ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಪದೇ ಪದೇ ವಿನಂತಿಸಿದರೂ ಸರಂಜಾಮುಗಳನ್ನು ಬಿಡುಗಡೆ ಮಾಡಲು ಕಸ್ಟಮ್ಸ್ ಅಥವಾ ಯುಎಇ ದೂತಾವಾಸಕ್ಕೆ ಕರೆ ಮಾಡಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.