ಕಾಸರಗೋಡು: ಕಾಸರಗೋಡು ಜಿಲ್ಲೆಯವರಿಗೆ ಕರ್ನಾಟಕಕ್ಕೆ ವ್ಯಾಪಾರ ವಹಿವಾಟುಗಳಿಗೋಸ್ಕರ ಹಾಗೂ ವಿವಿಧ ಉದ್ಯೋಗಗಳಿಗೆ ತೆರಳುವವರಿಗೆ ಕೇರಳ ಸರ್ಕಾರ ಹೇರಿರುವ ನಿಷೇಧವನ್ನು ಹಿಂತೆಗೆಯಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ ಶ್ರೀಕಾಂತ್ ಆಗ್ರಹಿಸಿದ್ದಾರೆ.
ಈಗಿರುವ ಅಡಚಣೆಯನ್ನು ಕೋನೆಗೊಳಿಸಿ ಪ್ರಯಾಣ ಅನುಮತಿ ನೀಡಬೇಕು ಎಂದು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಬಿಜಿಪಿ ಜಿಲ್ಲಾಧ್ಯಕ್ಷ ನ್‍ಯಾಯವಾದಿ ಕೆ. ಶ್ರೀಕಾಂತ್ ಕೇರಳ ಸರ್ಕಾರಕ್ಕೆ ಹಾಗೂ ಕಾಸರಗೋಡು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಕೇಂದ್ರ ಸರ್ಕಾರದ ಅನ್ ಲಾಕ್ 2 ಮತ್ತು 3 ರ ಮಾರ್ಗ ನಿರ್ದೇಶದ ಪ್ರಕಾರ ಅಂತರ್ ರಾಜ್ಯ ಪ್ರಯಾಣಾನುಮತಿ ನೀಡಿಲಾಗಿದೆ. ಆದರೆ ಅದಕ್ಕೆ ವಿರುದ್ಧವಾಗಿ ಕಾಸರಗೋಡು ಜಿಲ್ಲೆಯಲ್ಲಿ ಅಂತರ್ ರಾಜ್ಯ ಪ್ರಯಾಣ ನಿಬರ್ಂಧ ಮಾಡಿದ್ದು ಹಲವಾರು ಮನೆಗಳಲ್ಲಿ ನಿರೀಕ್ಷಣೆ ಕಡ್ಡಾಯವೆಂದು ಕೇರಳ ಸರ್ಕಾರ ತಿಳಿಸಿದೆ. ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೂ ಜಿಲ್ಲೆಯಲ್ಲಿ ಪ್ರಯಾಣ ನಿಬರ್ಂಧ ಹೇರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವೈದ್ಯಕೀಯ ರಂಗದಲ್ಲಿ ಅತ್ಯಂತ ಹಿನ್ನಡೆಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿರುವ ವೈದ್ಯರಿಗೆ ಪ್ರಯಾಣ ಅನುಮತಿ ಇಲ್ಲದಿರುವುದರಿಂದ ಹಲವಾರು ವೈದ್ಯರು ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶ್ರೀಕಾಂತ್ ಹೇಳಿರುವರು. ತುರ್ತು ಚಿಕಿತ್ಸೆ ಲಭ್ಯವಾಗದೆ ರೋಗಿಗಳು ಪರದಾಡುತ್ತಿದ್ದಾರೆ. ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳ್ಳಲ್ಲಿ ಕೆಲಸಮಾಡುವ ನೂರಾರು ಮಂದಿ ಜನರು ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಅವರ ಕುಟುಂಬಗಳು ನಿರ್ಗತಿಕವಾಗಿದೆ. ಎಲ್ಲರೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ತರಕಾರಿ ಗಾಡಿಗಳಿಗೆ ಅನಗತ್ಯ ನಿಷೇದ ಹೇರಿದ್ದಾರೆ ಎಂದು ಬಿಜಿಪಿ ಆರೋಪಿಸಿದೆ. ಕರ್ನಾಟಕಕ್ಕೆ ಇರುವ ಪ್ರಯಾಣ ಪೂರ್ಣವಾಗಿ ನಿಬರ್ಂಧ ಹೇರಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ತಡೆಯಲು ಸಾಧ್ಯವಾಗಿಲ್ಲ ಎಂಬ ವಿಷಯ ಪಿಣರಾಯಿ ಸರ್ಕಾರ ಅರಿತುಕೊಳ್ಳುವುದು ಉತ್ತಮ. ಆಶಾಸ್ತ್ರೀಯ ಹಾಗೂ ಅಪ್ರಯೋಗಿಕವಾದ ಅಭಿಪ್ರಾಯ ತೆಗೆದುಕೊಳ್ಳುವುದರ ಬದಲು ಪ್ರಾಯೋಗಿಕವಾದ ಯೋಜನೆಯನ್ನು ಕೋವಿಡ್ ಪ್ರತಿರೋದಕ್ಕೆ ಅವಶ್ಯಕತೆ ಎಂದು ಅವರು ಅಭಿಪ್ರಾಯಪಟ್ಟರು.
ಅಂತರ್ ರಾಜ್ಯ ಯಾತ್ರಾ ಅನುಮತಿ ನೀಡಬೇಕೆಂದು ಮನವಿಯನ್ನು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ಕಾಸರಗೋಡು ಜಿಲ್ಲಾಧಿಕಾರಿಗೆ ನ್ಯಾಯವಾದಿ ಕೆ. ಶ್ರೀಕಾಂತ್ ಸಲ್ಲಿಸಿದರು.