ಕಾಸರಗೋಡು: ಜ್ವರದ ಕಾರಣ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳ ಕೋವಿಡ್ ಪರೀಕ್ಷಾ ಫಲಿತಾಂಶಗಳು ಇದೀಗ ಹೊರಬಿದ್ದಿದ್ದು ಕೋವಿಡ್ ಬಾಧಿಸಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮರಣೋತ್ತರ ಪರೀಕ್ಷೆಯ ನಂತರ ಅಡ್ಕತ್ತಬೈಲು ನಿವಾಸಿ ಶಶಿಧರನ್ (62) ಮತ್ತು ಪಡನ್ನ ನಿವಾಸಿ ಎನ್.ಬಿ.ರೌಫ್ (62) ಅವರಿಗೆ ಕೋವಿಡ್ ವೈರಸ್ ಇರುವುದು ಪತ್ತೆಯಾಗಿದೆ. ಆಲಪ್ಪುಳ ವೈರಾಲಜಿ ಲ್ಯಾಬ್‍ನಲ್ಲಿ ನಡೆಸಿದ ತಜ್ಞರ ಪರೀಕ್ಷೆಯಿಂದ ಇದು ದೃಢಪಟ್ಟಿದೆ.
ಜ್ವರದ ಕಾರಣ ಚಿಕಿತ್ಸೆಯಲ್ಲಿದ್ದ ಅಡ್ಕತ್ತಬೈಲು ನಿವಾಸಿ ಶಶಿಧರನ್ ಭಾನುವಾರ ನಿಧನರಾಗಿದ್ದರು. ಅವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಂತರದ ಪ್ರತಿಜನಕ ಪರೀಕ್ಷೆಯಲ್ಲಿ ಕೋವಿಡ್ ದೃಢಪಡಿಸಲಾಯಿತು. ಅವರ ಗಂಟಲ ದ್ರವವನ್ನು ಆಲಪ್ಪುಳ ವೈರಾಲಜಿ ಲ್ಯಾಬ್‍ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಪಡನ್ನ ನಿವಾಸಿ ಎನ್.ಬಿ.ರೌಫ್ ಕಳೆದ ಭಾನುವಾರ ನಿಧನರಾಗಿದ್ದರು. ಅನಾರೋಗ್ಯ ಕಾರಣ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದರು. ನಂತರದ ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್ ಇರುವುದು ದೃಢಪಟ್ಟಿತು. ಇದನ್ನು ಆಲಪ್ಪುಳಕ್ಕೂ ಕಳುಹಿಸಲಾಗಿದೆ. ಇಬ್ಬರ ಸಾವುಗಳನ್ನು ಆರೋಗ್ಯ ಇಲಾಖೆಯ ಕೋವಿಡ್ ಸಾವಿನ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿತು. ತ್ರಿಕ್ಕರಿಪುರದ ಅಬ್ದುಲ್ ರಹಮಾನ್ ಮತ್ತು ಕುಂಜತ್ತೂರಿನ ಖದೀಜಾ ಅವರು ನಿನ್ನೆ ಕೋವಿಡ್‍ನಿಂದ ನಿಧನರಾದರು.