ತಿರುಮಲ: ಶೀಘ್ರದಲ್ಲಿಯೇ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್ ವಿಬಿಸಿ)ಯನ್ನು ಹಿಂದಿ, ಕನ್ನಡ ಭಾಷೆಗಳಲ್ಲೂ ಪ್ರಾರಂಭಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಪ್ರಕಟಿಸಿದ್ದಾರೆ.
ಎಸ್ ವಿ ಬಿಸಿ ಇನ್ನೂ ಮುಂದೆ ಜಾಹೀರಾತು ಮುಕ್ತ ವಾಹಿನಿಯನ್ನಾಗಿಸಲಾಗುವುದು. ಟಿಟಿಡಿ ಸಹಕಾರದ ಜತೆಗೆ ದಾನಿಗಳು ನೀಡುವ ದೇಣಿಗೆ ಸ್ವೀಕರಿಸಿ ವಾಹಿನಿ ನಡೆಸಲಿದ್ದೇವೆ ಎಂದು ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.
ತಿಮ್ಮಪ್ಪನ ದರ್ಶನಕ್ಕೆ ಸಂಬಂಧಿಸಿದಂತೆ ಭಕ್ತರ ಸಂಖ್ಯೆ ಹೆಚ್ಚಿಸಿ, ಯಥಾಸ್ಥಿತಿಯಲ್ಲಿಯೇ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೊರೊನಾ ಸೋಂಕು ತಗುಲಿರುವ ಓರ್ವ ಆರ್ಚಕರನ್ನು ಹೊರತುಪಡಿಸಿ ಉಳಿದ ಎಲ್ಲರು ಚೇತರಿಸಿಕೊಂಡಿದ್ದಾರೆ. ಈ ಆರ್ಚಕರು ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿ ಎಂದು ವೈ.ವಿ. ಸುಬ್ಬಾರೆಡ್ಡಿ ಹಾರೈಸಿದ್ದಾರೆ.
ಸೋಂಕಿನಿಂದ ಚೇತರಿಸಿಕೊಂಡಿರುವ ಅರ್ಚಕರು ಕರ್ತವ್ಯಗಳಿಗೆ ಹಾಜರಾಗಲಿದ್ದಾರೆ. ಕಲ್ಯಾಣೋತ್ಸವ ಆನ್ ಲೈನ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. ಆನ್ ಲೈನ್ ನಲ್ಲಿ ಭಕ್ತರು ಕಲ್ಯಾಣೋತ್ಸವವನ್ನು ಕಾಯ್ದಿರಿಸಬಹುದಾಗಿದೆ. ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರಸಾದ ಪೂರೈಸಲಾಗುವುದು ಟಿಟಿಡಿ ಅಧ್ಯಕ್ಷರು ಹೇಳಿದ್ದಾರೆ.