ಮುಂಬೈ: ಗಣೇಶ ಚತುರ್ಥಿಗೆ ಇನ್ನೊಂದು ತಿಂಗಳು ಬಾಕಿ ಇದೆ. ಕೋವಿಡ್-19 ಪರಿಸ್ಥಿತಿಯಿಂದಾಗಿ ಈ ಬಾರಿ ಅನೇಕ ಗಣೇಶೋತ್ಸವಗಳು ನಡೆಯುವುದು ಅನುಮಾನ.
ಗಣೇಶೋತ್ಸವ ಎಂದರೆ ನೆನಪಾಗುವ ಮುಂಬೈ ನ ಗಣೇಶೋತ್ಸವದ ಮೇಲೆಯೂ ಕೋವಿಡ್-19 ರ ಕರಿನೆರಳು ಆವರಿಸಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈ ನ ಲಾಲ್‍ಬೌಚಾ ರಾಜ ಗಣೇಶೋತ್ಸವ ಮಂಡಲ ಈ ಬಾರಿ ಗಣೇಶೋತ್ಸವ ನಡೆಸದೇ ಇರಲು ನಿರ್ಧರಿಸಿದ್ದು, ಇದರ ಬದಲಾಗಿ ರಕ್ತದಾನ ಶಿಬಿರ ನಡೆಸಲು ತೀರ್ಮಾನಿಸಿದೆ.
ಈ ನಿರ್ಧಾರವನ್ನು ಮಂಡಲ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಹಬ್ಬವನ್ನು ಆಚರಿಸುತ್ತಿದ್ದ 11 ದಿನಗಳ ಕಾಲವೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದೆ. "ರಕ್ತದಾನ ಶಿಬಿರ, ಪ್ಲಾಸ್ಮಾದಾನ ಶಿಬಿರಗಳನ್ನು ಗಣೇಶ ಚತುರ್ಥಿಯ ಸಂದರ್ಭಗಳಲ್ಲಿ ಹಮ್ಮಿಕೊಳ್ಳಲಾಗುವುದು ಅಷ್ಟೇ ಅಲ್ಲದೇ ಎಲ್ಒಸಿ, ಎಲ್ಎಸಿಸಿಗಳಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ವರ್ಷ ಮುಂಬೈ ನ ಲಾಲ್‍ಬೌಚಾ ರಾಜ ಗಣೇಶೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದರು.