ನವದೆಹಲಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಮೇಲೆ ಕೇಂದ್ರ ಸರ್ಕಾರದ ಒತ್ತಡ ಇದೆ ಎಂಬ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು, ನನಗೆ ಯಾವುದೇ ಒತ್ತಡ ಇಲ್ಲ. ಸಂವಿಧಾನವೇ ನನಗೆ ಸುಪ್ರೀಂ ಎಂದು ಗುರುವಾರ ಹೇಳಿದ್ದಾರೆ.
ವಿಶೇಷ ಅಧಿವೇಶನ ಕರೆಯುವುದಕ್ಕಾಗಿ ಅಶೋಕ್ ಗೆಹ್ಲೋಟ್ ಸಲ್ಲಿಸಿದ್ದ ನಾಲ್ಕು ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದ ಮಿಶ್ರಾ ಅವರು ಕೊನೆಗೆ ಐದನೇ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು, ಆಗಸ್ಟ್ 14ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಕರೆಯಲು ಅನುಮತಿ ನೀಡಿದ್ದಾರೆ. ಸಂವಿಧಾನದ ನಿಬಂಧನೆಗಳನ್ನು ಅನುಸರಿಸುವಂತೆ ನಾನು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದೇನೆ. ಕೊರೋನಾ ವೈರಸ್ ನಿಯಂತ್ರಿಸುವ ಬಗ್ಗೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸುವಂತೆ ಗೆಹ್ಲೋಟ್ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದು ಮಿಶ್ರಾ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ ಅವರು, ರಾಜ್ಯಪಾಲರಿಗೆ ಸಂವಿಧಾನವೇ ಸುಪ್ರೀ ಆಗಿರುತ್ತದೆ. ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದಿದ್ದಾರೆ.
ರಾಜ್ಯಪಾಲರಾಗುವ ಮುನ್ನ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಮಿಶ್ರಾ ಅವರು, ತಮ್ಮ ವಿರುದ್ಧ ಕಾಂಗ್ರೆಸ್ ಶಾಸಕರು ರಾಜಭನದಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಯಾರೊಬ್ಬರ ವಿರುದ್ಧವೂ ಇದು ಸೂಕ್ತ ವರ್ತನೆಯಲ್ಲ ಎಂದಿದ್ದಾರೆ.