ಎರ್ನಾಕುಳಂ: ಯುಎಇ ಕಾನ್ಸುಲೇಟ್ ಬ್ಯಾಗ್ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಲಾಕರ್‍ನಿಂದ ಇತ್ತೀಚೆಗೆ ಪತ್ತೆಯಾದ 1 ಕೋಟಿ ರೂ. ಹಣ ಚಿನ್ನದ ಕಳ್ಳಸಾಗಣೆಯ ಮೂಲಕ ಗಳಿಸಿದ್ದಲ್ಲ. ಅದು ಕೇರಳ ಸರ್ಕಾರದ ಲೈಫ್ ಮಿಷನ್ ಯೋಜನೆಯ ಲಂಚ ರೂಪದ ಹಣ ಎಂದು ಸ್ವಪ್ನ ತಪ್ಪೊಪ್ಪಿಕೊಂಡಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.
ಮುಖ್ಯಮಂತ್ರಿಗಳೇ ಲೈಫ್ ಮಿಷನ್ ಯೋಜನೆಯ ಅಧ್ಯಕ್ಷರಾಗಿರುವುದರಿಂದ ಸರ್ಕಾರ ತೀವ್ರ ಮುಖಭಂಗ ಅನುಭವಿಸಲಿದೆ ಎನ್ನಲಾಗಿದೆ. ಜೊತೆಗೆ ಲಭ್ಯವಾದ 1 ಕೋಟಿ ರೂ. ಹಣ ಚಿನ್ನ ಕಳ್ಳಸಾಗಾಣಿಕೆಯಿಂದ ಲಭಿಸಿದ್ದೆಂದು ರಾಜ್ಯ ಸರ್ಕಾರ ಬಿಂಬಿಸಿರುವುದು ಹಲವು ಊಹಾಪೋಪಗಳಿಗೂ ಕಾರಣವಾಗಿದೆ.
ಎರಡು ವರ್ಷಗಳ ಹಿಂದೆ ಪ್ರವಾಹದ ಬಳಿಕ ಗಲ್ಪ್ ರಾಷ್ಟ್ರಗಳಿಂದ ನೆರವು ಪಡೆಯಲು ಮುಖ್ಯಮಂತ್ರಿಗಳು 2018 ರಲ್ಲಿ ದುಬೈಗೆ ಭೇಟಿ ನೀಡುವ ನಾಲ್ಕು ದಿನಗಳ ಮೊದಲು ಶಿವಶಂಕರ್ ಮತ್ತು ಸ್ವಪ್ನಾ ಅವರು ದುಬೈನಿಂದ ತಿರುವನಂತಪುರಂಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂದು ತನಿಖಾ ತಂಡ ಈ ಹಿಂದೆ ಗುರುತಿಸಿತ್ತು.
ಆ ಭೇಟಿಯ ಸಮಯದಲ್ಲಿ ಯುಎಇ ರೆಡ್ ಕ್ರೆಸೆಂಟ್ ಪ್ರಾಧಿಕಾರವು 20 ಕೋಟಿ ರೂ. ಈ ಒಪ್ಪಂದಕ್ಕೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅಂತರರಾಷ್ಟ್ರೀಯ ನೆರವು ವ್ಯವಹಾರಗಳ ರೆಡ್ ಕ್ರೆಸೆಂಟ್ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಲೈಫ್ ಮಿಷನ್ ಸಿಇಒ ಯುವಿ ಜೋಸ್ ಸಹಿ ಹಾಕಿದ್ದರು. ಈ ಸಹಾಯದಿಂದ ತ್ರಿಶೂರ್‍ನ ವಡಕ್ಕಂಚೇರಿಯಲ್ಲಿ 2 ಎಕರೆ ಸರ್ಕಾರಿ ಭೂಮಿಯಲ್ಲಿ 140 ಫ್ಲ್ಯಾಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಸ್ವಪ್ನಾಳ ಪ್ರಕಾರ ಗುತ್ತಿಗೆಗಾಗಿ ಖಾಸಗಿ ಕಂಪನಿಯು ಪಾವತಿಸಿದ ಕಮಿಷನ್ 1 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದ್ದು ಪ್ರಕರಣ ಸುತ್ತಿ ಬಳಸಿ ಮುಖ್ಯಮಂತ್ರಿಗಳತ್ತ ಸಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.