ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಸರ್ಕಾರ ವೈಷ್ಣೋದೇವಿ ಸೇರಿ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಹೊರಡಿಸಿದೆ.
ತ್ರಿಕೂಟ ಪರ್ವತದ ಕಾಟ್ರಾದಲ್ಲಿರುವ ಶ್ರೀಮಾತಾ ವೈಷ್ಣೋದೇವಿ ದೇಗುಲಕ್ಕೆ ಆಗಸ್ಟ್ 16ರಿಂದ ಭೇಟಿ ನೀಡಬಹುದು. ಪ್ರತಿದಿನ ಐದು ಸಾವಿರ ಜನರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 30ರವರೆಗೂ ಈ ನಿರ್ಬಂಧ ಇರಲಿದೆ.
ದೇಗುಲಕ್ಕೆ ಭೇಟಿ ನೀಡುವ ಎಲ್ಲ ಭಕ್ತರು ತಮ್ಮ ಬಳಿಯಿರುವ ಸ್ಮಾರ್ಟ್ಫೋನ್ನಲ್ಲಿ ಕೋವಿಡ್ ಮುಂಜಾಗ್ರತೆ ವಹಿಸಲು ಆರೋಗ್ಯಸೇತು ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.ಬೇರೆ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಕೋವಿಡ್ ಆ್ಯಂಟಿಜೆನ್ ಟೆಸ್ಟ್ ಕಡ್ಡಾಯವಾಗಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಮಾತ್ರ ಕಾಟ್ರಾದಿಂದ ಮುಂದೆ ಸಾಗಬಹುದು.
ದರ್ಶನಕ್ಕೆ ಭಕ್ತರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜಮ್ಮು ಕಾಶ್ಮೀರ ಹೊರತುಪಡಿಸಿ ಹೊರ ರಾಜ್ಯದ 500 ಜನರಿಗಷ್ಟೇ ಪ್ರತಿದಿನ ಭೇಟಿ ನೀಡಬಹುದು. ದರ್ಶನದ ಬಳಿಕ ಭವನದಲ್ಲಿ ಉಳಿದುಕೊಳ್ಳಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.