ನವದೆಹಲಿ: ಸ್ವದೇಶಿ ನಿರ್ಮಿತ ವೆಂಟಲೇಟರ್ ಗಳ ರಫ್ತಿಗೆ ಅವಕಾಶ ಕಲ್ಪಿಸುವ ಆರೋಗ್ಯ ಸಚಿವಾಲಯದ ಪ್ರಸ್ತಾವಕ್ಕೆ ಕೋವಿಡ್-19 ಉನ್ನತ ಮಟ್ಟದ ಸಚಿವರ ಗುಂಪು ಒಪ್ಪಿಗೆ ನೀಡಿದೆ.
ಭಾರತ ಪ್ರಗತಿಪರ ರಾಷ್ಟ್ರವಾಗಿ ಮುಂದುವರೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್-19 ರೋಗಿಗಳ ಸಾವಿನ ಪ್ರಮಾಣ ಪ್ರಸ್ತುತ ಶೇ. 2.15 ರಷ್ಟಿದ್ದು, ಕಡಿಮೆಯಾಗುತ್ತಿದೆ. ಅಂದರೆ ಕಡಿಮೆ ಸಂಖ್ಯೆಯ ಸಕ್ರಿಯ ಪ್ರಕರಣಗಳು ವೆಂಟಿಲೇಟರ್ ನಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಜುಲೈ 31ರಂದು ದೇಶಾದ್ಯಂತ ಕೇವಲ 0.22 ರಷ್ಟು ಸಕ್ರಿಯ ಪ್ರಕರಣಗಳು ಮಾತ್ರ ವೆಂಟಿಲೇಟರ್ ನಲ್ಲಿರುವುದಾಗಿ ಅದು ತಿಳಿಸಿದೆ.
ಸ್ವದೇಶಿ ನಿರ್ಮಿತ ವೆಂಟಿಲೇಟರ್ ಗಳ ರಪ್ತಿಗೆ ಅಗತ್ಯವಿರುವ ಮುಂದಿನ ಕಾರ್ಯಕ್ಕಾಗಿ ಸಚಿವರ ಗುಂಪಿನ ನಿರ್ಧಾರವನ್ನು ವಿದೇಶಿ ವ್ಯಾಪಾರದ ಮಹಾನಿರ್ದೇಶಕರಿಗೆ ತಿಳಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದೀಗ ವೆಂಟಿಲೇಟರ್ ಗಳ ರಪ್ತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವಿದೇಶಿ ರಾಷ್ಟ್ರಗಳಲ್ಲಿ ಸ್ವದೇಶಿ ವೆಂಟಿಲೇಟರ್ ಗಳಿಗೆ ಹೊಸ ಮಾರುಕಟ್ಟೆಯನ್ನು ಕಂಡುಹಿಡಿದಂತಾಗುತ್ತದೆ ಎಂಬ ಭರವಸೆ ಹೊಂದಿರುವುದಾಗಿ ಹೇಳಿರುವ ಆರೋಗ್ಯ ಸಚಿವಾಲಯ, ಸ್ವದೇಶಿ ನಿರ್ಮಿತ ವೆಂಟಲೇಟರ್ ಗಳ ಉತ್ಪಾದನಾ ಸಾಮಥ್ರ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನವರಿಗೆ ಹೋಲಿಸಿದರೆ 20ಕ್ಕೂ ಹೆಚ್ಚು ಸ್ವದೇಶಿ ವೆಂಟಿಲೇಟರ್ ಉತ್ಪಾದನಾ ಸಂಸ್ಥೆಗಳಿವೆ.