ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ ಕಾರ್ಯತಂತ್ರ ಯಶಸ್ವಿ ಅನುಷ್ಠಾನ, ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸಾ ನಿರ್ವಹಣೆಯೊಂದಿಗೆ ಪರಿಣಾಮಕಾರಿ ಪರೀಕ್ಷೆಯಿಂದಾಗಿ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.70ರ ಸನ್ನಿಹದಲ್ಲಿದ್ದು, ಮರಣ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 15 ಲಕ್ಷದ 83 ಸಾವಿರದ 489 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 69. 80ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು 6,39,929 ಸಕ್ರಿಯ ಪ್ರಕರಣಗಳಲ್ಲಿ ಶೇ. 28.21 ರಷ್ಟು ಪ್ರಕರಣಗಳು ಮಾತ್ರ ಪಾಸಿಟಿವ್ ಕೇಸ್ ಗಳಾಗಿವೆ. ಇವರೆಲ್ಲರೂ
ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಸಚಿವಾಲಯ ತಿಳಿಸಿದೆ.
ಚೇತರಿಕೆ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಚೇತರಿಕೆಯಾದ ರೋಗಿಗಳು ಮತ್ತು ಸಕ್ರಿಯ ಕೋವಿಡ್-19 ಪ್ರಕರಣಗಳ ನಡುವಣ ಅಂತರ ಸುಮಾರು 9.5 ಲಕ್ಷಕ್ಕೆ ತಲುಪಿದ್ದು, ಸೋಂಕು ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸಾ ಕಾರ್ಯತಂತ್ರದಿಂದ ಈ ಅಂತರ ಪ್ರತಿದಿನ ಪ್ರಗತಿಯಾಗುತ್ತಿದೆ.ಮರಣ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆಯಾಗಿದ್ದು, ಪ್ರಸ್ತುತ 1.99 ನಷ್ಟಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.