ನವದೆಹಲಿ: ಕೋವಿಡ್-19ಗೆ ಮೂರು ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿದ್ದು ಸದ್ಯದಲ್ಲಿಯೇ ದೇಶದ ಜನತೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಿಂದ ಭಾಷಣ ಮಾಡುವ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೋವಿಡ್-19ಗೆ ಲಸಿಕೆ, ಔಷಧಿ ಯಾವಾಗ ಸಿದ್ದವಾಗಿ ಮಾರುಕಟ್ಟೆಗೆ ಬರುತ್ತದೆ ಎಂದು ಜನರು ಕೇಳುತ್ತಿದ್ದಾರೆ ಮತ್ತು ಕಾಯುತ್ತಿದ್ದಾರೆ. ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯಲು ಸತತ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಭಾರತದಲ್ಲಿ ಮೂರು ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿವೆ. ಅವುಗಳ ಉತ್ಪಾದನೆ ಮತ್ತು ವಿತರಣೆಗೆ ನೀಲನಕ್ಷೆ ಸಿದ್ದವಾಗುತ್ತಿದೆ ಎಂದರು.
ವಿಜ್ಞಾನಿಗಳಿಂದ ಅನುಮತಿ ಸಿಕ್ಕಿದ ನಂತರ ಬೃಹತ್ ಪ್ರಮಾಣದಲ್ಲಿ ಇವುಗಳ ಉತ್ಪಾದನೆ ಆರಂಭವಾಗುತ್ತದೆ. ಈ ಕೊರೋನಾ ಸಂಕಷ್ಟವನ್ನು ಭಾರತ ಖಂಡಿತವಾಗಿಯೂ ಧೈರ್ಯವಾಗಿ ಎದುರಿಸಿ ಜಯಶಾಲಿಯಾಗಲಿದೆ. ಅಲ್ಲಿಯವರೆಗೆ ಜನತೆ ತಾಳ್ಮೆಯಿಂದ ಸರ್ಕಾರ ಜೊತೆ ಸಹಕರಿಸಬೇಕೆಂದು ಕೇಳಿಕೊಂಡರು.
ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ: ದೇಶದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಜಾರಿಗೆ ತರುವುದಾಗಿ ಇದೇ ಸಂದರ್ಭದಲ್ಲಿ ಪ್ರಧಾನಿ ಘೋಷಿಸಿದರು. ಭಾರತದ ಆರೋಗ್ಯ ವಲಯದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ ಹೊಸ ಕ್ರಾಂತಿಯನ್ನುಂಟುಮಾಡಲಿದೆ ಎಂದರು.
ಪ್ರತಿಯೊಬ್ಬ ಭಾರತೀಯ ಆರೋಗ್ಯ ಐಡಿ ಕಾರ್ಡು ಪಡೆಯಲಿದ್ದಾರೆ. ಪ್ರತಿ ಬಾರಿ ವೈದ್ಯರ ಬಳಿ ಅಥವಾ ಫಾರ್ಮಸಿಗೆ ಹೋಗುವಾಗ ಆರೋಗ್ಯ ಕಾರ್ಡಿನಲ್ಲಿ ಲಾಗ್ ಆಗುತ್ತದೆ. ವೈದ್ಯರ ಅಪಾಯಿಂಟ್ ಮೆಂಟ್ ನಿಂದ ಹಿಡಿದು ಅವರು ನೀಡುವ ವೈದ್ಯಕೀಯ ಸಲಹೆ ಪ್ರತಿಯೊಂದು ಆರೋಗ್ಯ ಕಾರ್ಡಿನಲ್ಲಿ ದಾಖಲಾಗುತ್ತದೆ.