ನವದೆಹಲಿ: ದೇಶದಲ್ಲಿ ಪ್ರತಿದಿನವೂ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಪ್ರಗತಿಯಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಏಮ್ಸ್ ನಲ್ಲಿಂದು ಆಯೋಜಿಸಲಾಗಿದ್ದು ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸದ್ಯದಲ್ಲಿಯೇ ಗೆಲುವು ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್-19 ಮರಣ ಪ್ರಮಾಣದಲ್ಲಿಯೂ ಪ್ರತಿದಿನವೂ ಕಡಿಮೆಯಾಗುತ್ತಿದೆ. ಸೋಂಕು ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ನಿನ್ನೆ ಒಂದೇ ದಿನ ಸಮಾರು 8 ಲಕ್ಷ ರೋಗಿಗಳಿಗೆ ಪರೀಕ್ಷೆ ಮಾಡಲಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಕೋವಿಡ್ ವಾರಿಯರ್ಸ್ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.ಮುಂದಿನ ಎರಡು ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ ಎಂಬ
ಭರವಸೆ ನೀಡಿದರು.
ಈ ಮಧ್ಯೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 64 ಸಾವಿರದ 553 ಹೊಸ ಕೊರೋನಾ ವೈರಸ್ ಪ್ರಕರಣಗಳು ಕಂಡುಬಂದಿದ್ದು, 1007 ಸಾವು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 24,61,191ಕ್ಕೆ ಏರಿಕೆಯಾಗಿದೆ.
17,51,556 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.