ತಿರುವನಂತಪುರ: ಭಾದ್ರಪದ ಮಾಸ ಆರಂಭಗೊಳ್ಳುವ (ಚಿಂಗಂ ಒನ್) ಆಗಸ್ಟ್ 17 ರಿಂದ ತಿರುವಾಂಕೂರು ದೇವಸ್ವಂ ಮಂಡಳಿಯ ವ್ಯಾಪ್ತಿಯ ದೇವಾಲಯಗಳಿಗೆ ಭಕ್ತರ ಭೇಟಿಗೆ ಅವಕಾಶ ನೀಡಲು ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಶಬರಿಮಲೆ ಹೊರತುಪಡಿಸಿ ಎಲ್ಲಾ ದೇವಾಲಯಗಳಲ್ಲಿ ದರ್ಶನಕ್ಕೆ ಅನುಮತಿ ನೀಡಲು ಮಂಡಳಿ ಅನುಮತಿ ನೀಡಿದೆ. ಆದರೆ, ಬೆಳಿಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 6.30 ರಿಂದ ಸಂಜೆ 7 ರ ನಡುವೆ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಒಮ್ಮೆಗೆ ಕೇವಲ ಐವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ನೂತನ ಆದೇಶ ಅವಕಾಶ ನೀಡಿದೆ. 10 ವರ್ಷದೊಳಗಿನವರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ದೇವಾಲಯದ ಒಳಗೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಐದು ಮಂದಿ ದರ್ಶನ ಮಾಡಿ ಹೊರಗೆ ಬಂದ ನಂತರವೇ ಮುಂದಿನ ಐದು ಜನರನ್ನು ದೇವಸ್ಥಾನದೊಳಗೆ ಬಿಡಲಾಗುತ್ತದೆ. ದರ್ಶನಕ್ಕೆ ಹಾಜರಾಗುವ ಭಕ್ತರು ಮುಖವಾಡ ಧರಿಸಬೇಕು. ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಭಕ್ತರು ದೇವಾಲಯದ ಹೊರಗೆ ಸಾನಿಟೈಸಿಂಗ್ ಮೂಲಕ ಕೈ ತೊಳೆಯಲು ವ್ಯವಸ್ಥೆ ಮಾಡಲಾಗುವುದು ಎಮದು ತಿಳಿಸಲಾಗಿದೆ.
ಭಕ್ತರು ಅರ್ಪಣೆಗಳನ್ನು ಮಾಡಬಹುದು. ಆದರೆ ಪ್ರಸಾದವನ್ನು ದೇವಾಲಯದಿಂದ ನೇರವಾಗಿ ವಿತರಿಸಲಾಗುವುದಿಲ್ಲ. ವಿಶೇಷ ಕೌಂಟರ್‍ಗಳ ಮೂಲಕ ಮಾತ್ರ ಪ್ರಸಾದವನ್ನು ವಿತರಿಸಲಾಗುವುದು. ದೇವಾಲಯದ ಕೆರೆಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅಥವಾ ಕೈ ಕಾಲುಗಳನ್ನು ತೊಳೆಯಲು ಅವಕಾಶವಿಲ್ಲ. ದರ್ಶನವಾದ ಕೂಡಲೇ ಭಕ್ತರು ಹೊರಗೆ ಹೋಗಿ ಮುಂದಿನ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಗರ್ಭಿಣಿಯರಿಗೆ ಮತ್ತು ಇತರ ಕಾಯಿಲೆ ಇರುವವರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿಲ್ಲ. ಚಿಂಗಂ ಒನ್ ಗಾಗಿ ದೇವಸ್ವಂ ಬೋರ್ಡ್ ದೇವಾಲಯಗಳಲ್ಲಿ ವಿಶೇಷ ಗಣಪತಿ ಹೋಮವನ್ನು ನಡೆಸಲು ಮಂಡಳಿ ನಿರ್ಧರಿಸಿದೆ.
ದೇವಾಲಯಗಳಲ್ಲಿ ಮಧ್ಯಾಹ್ನದ ಪ್ರಸಾದ ಭೋಜನಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ನೋಟಿಸ್ ಬೋರ್ಡ್ ಮೂಲಕ ಭಕ್ತರಿಗೆ ಸೂಚನೆಗಳನ್ನು ಎಲ್ಲಾ ದೇವಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ.