ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಎಸ್ ಎ ಬೊಬ್ಡೆ ಮತ್ತು ಉನ್ನತ ನ್ಯಾಯಾಲಯದ ಕಾರ್ಯವೈಖರಿ ಟೀಕಿಸಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದ್ದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸರ್ವೋಚ್ಚ ನ್ಯಾಯಾಲಯ 1 ರೂಪಾಯಿ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಒಂದೊಮ್ಮೆ ಸೆಪ್ಟೆಂಬರ್ 15ರ ಒಳಗೆ ದಂಡ ಕಟ್ಟದೇ ಇದ್ದಲ್ಲಿ, ಅವರು 3 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಮತ್ತು 3 ವರ್ಷ ವಕೀಲಿಕೆ ಅಭ್ಯಾಸದಿಂದ ಅವರನ್ನು ನಿರ್ಬಂಧಿಸಲಾಗುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ದೇಶದ ಅತ್ಯುನ್ನತ ನ್ಯಾಯ ವ್ಯವಸ್ಥೆಯ ಕಾರ್ಯಕ್ಷಮತೆ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯ ಮೂರ್ತಿಗಳು ನೀಡಿರುವ ತೀರ್ಪುಗಳಿಗೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಮಾಡಿರುವ ಎರಡು ಟ್ವೀಟ್‌ಗಳು ವಿವಾದಾಸ್ಪದವಾಗಿದ್ದು,ಇವುಗಳ ಬಗ್ಗೆ ಸುಪ್ರೀಂ ಕೋರ್ಟ್ ತಾನಾಗಿಯೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು,ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ನಂತರ ಅವರಿಗೆ ಕ್ಷಮೆ ಕೇಳಲು ಸಮಯಾವಕಾಶ ನೀಡಲಾಗಿತ್ತು. ಆದರೆ, ಎರಡೆರಡು ಬಾರಿ ಅವಕಾಶ ನೀಡಿದ್ದರೂ ಅವರು ಕ್ಷಮೆ ಕೇಳಲು ನಿರಾಕರಿಸಿದ್ದರು.ತಾವು ಮಾಡಿದ ನ್ಯಾಯಾಂಗ ನಿಂದನೆ ಟ್ವೀಟ್ ಕುರಿತು ಕೋರ್ಟ್ ಯಾವುದೇ ಶಿಕ್ಷೆ ನೀಡಲಿ, ಅನುಭವಿಸುತ್ತೇನೆ.ಆದರೆ ಕ್ಷಮೆಯಾಚಿಸುವುದಿಲ್ಲ ಎಂದು 63 ವರ್ಷದ ಪ್ರಶಾಂತ್ ಭೂಷಣ್ ಹೇಳಿದ್ದರು.
ಶಾಂತ್ ಭೂಷಣ್ ಅವರ ಪರ ವಾದಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್ ಅವರು, ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷೆಗೊಳಪಡಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು. ಭೂಷಣ್ ಅವರ ಪ್ರಕರಣವನ್ನು ಮುಚ್ಚುವುದು ಮಾತ್ರವಲ್ಲ, ವಿವಾದವನ್ನೇ ಅಂತ್ಯಗೊಳಿಸುವ ಮೂಲಕ ನ್ಯಾಯಾಲಯ ಉತ್ತಮ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿದರು.
ಸೆ.10ಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ ಇಂದೆಯೇ ತೀರ್ಪನ್ನು ಪ್ರಕಟಿಸಿ, 1 ರೂಪಾಯಿ ದಂಡವನ್ನು ಪ್ರಶಾಂತ್ ಭೂಷಣ್ ಗೆ ವಿಧಿಸಿದೆ.ಆದರೆ, ದಂಡವನ್ನು ಪ್ರಶಾಂತ್ ಭೂಷಣ್ ಕಟ್ಟುವರೇ ಅಥವಾ ಹೋರಾಟವನ್ನು ಮುಂದುವರೆಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.