ತಿರುವನಂತಪುರ: ಸ್ವತಃ ಜಿಲ್ಲಾಧಿಕಾರಿಗಳ ಖಾತೆಯನ್ನು ಬಳಸಿ ಹಣ ವಂಚಿಸಿರುವುದನ್ನು ಕೇಳಿದ್ದೀರಾ. ಆದರೆ ತಿರುವನಂತಪುರದಲ್ಲಿ ಅಂತಹ ವಿದ್ಯಮಾನ ನಡೆದು ಕಳವಳಕ್ಕೆ ಕಾರಣವಾಗಿದೆ. ತಿರುವನಂತಪುರ ಜಿಲ್ಲಾಧಿಕಾರಿಯ ಖಜಾನೆ ಖಾತೆಯಿಂದ ಅಪಾರ ಮೊತ್ತವನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ. ನಿವೃತ್ತ ಅಧಿಕಾರಿಯ ದಾಖಲೆಗಳನ್ನು ಬಳಸಿಕೊಂಡು 2 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂದು ತಿಳಿದುಬಂದಿದೆ. ವಂಚಿಯೂರ್ ಉಪ ಖಜಾನೆಯಲ್ಲಿನ ವಂಚನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಖಜಾನೆ ನಿರ್ದೇಶಕರು ತಿಳಿಸಿದ್ದಾರೆ.
ಘಟನೆಯಲ್ಲಿ ಖಜಾನೆ ಅಧಿಕಾರಿಯ ವಿರುದ್ಧ ಖಜಾನೆ ಅಧಿಕಾರಿ ದೂರು ನೀಡಿದ್ದರು ಎಂದು ವರದಿಯಾಗಿದೆ. ತಿಂಗಳ ಹಿಂದೆ ಇಲ್ಲಿಯ ಸೇವೆಯಿಂದ ವಿರಮಿಸಿದ ಅಧಿಕಾರಿಯ ಬಳಕೆದಾರ ಹೆಸರು ಮತ್ತು ಪಾಸ್‍ವರ್ಡ್ ಬಳಸಿ ಈ ಹಗರಣವನ್ನು ನಡೆಸಲಾಗಿದೆ. ಜೊತೆಗೆ ಈ ವಂಚನೆಯ ಹಿಂದೆ ಇನ್ನಷ್ಟು ಉದ್ಯೋಗಿಗಳು ಭಾಗಿಯಾಗಿರುವರೇ ಎಂಬ ಬಗ್ಗೆ ತಿಳಿದುಬಂದಿಲ್ಲ. ಉಪ ಖಜಾನೆಯ ಹಿರಿಯ ಅಕೌಂಟೆಂಟ್ ಒಬ್ಬರು ತಮ್ಮ ಖಾತೆಗೆ 2 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ಹಣವು ಕಾಣೆಯಾಗಿದೆ ಎಂದು ಸ್ಪಷ್ಟವಾದ ನಂತರ ಉಪ ಖಜಾನೆ ಅಧಿಕಾರಿ ಜಿಲ್ಲಾ ಖಜಾನೆ ಅಧಿಕಾರಿ ಮತ್ತು ಖಜಾನೆ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದರು.
ವಂಚಿಯೂರ್ ಉಪ ಖಜಾನೆಯ ಅಧಿಕಾರಿ ಈ ವರ್ಷ ಮೇ 31 ರಂದು ಸೇವೆಯಿಂದ ನಿವೃತ್ತರಾಗಿದ್ದರು. ಆದರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಅವರು ಎರಡು ತಿಂಗಳ ರಜೆಯಲ್ಲಿದ್ದರು. ಅವರ ಬಳಕೆದಾರ ಹೆಸರು ಮತ್ತು ಪಾಸ್‍ವರ್ಡ್ ನ್ನು ವಂಚನೆಗೆ ಬಳಸಲಾಗಿದೆ. ಈ ಮಾಹಿತಿಯೊಂದಿಗೆ ಹಿರಿಯ ಅಕೌಂಟೆಂಟ್ ಜಿಲ್ಲಾಧಿಕಾರಿಯ ಖಾತೆಯಿಂದ 2 ಕೋಟಿ ರೂ.ಗಳನ್ನು ತಮ್ಮ ಸ್ವಂತ ಖಾತೆಗೆ ವರ್ಗಾಯಿಸಿದರು ಮತ್ತು ನಂತರ ವರ್ಗಾವಣೆಯ ವಿವರಗಳನ್ನು ತೆಗೆದುಹಾಕಿದರು. ಆದರೆ ದಿನದ ಪುಸ್ತಕದಲ್ಲಿ 2 ಕೋಟಿ ರೂ.ಗಳ ವ್ಯತ್ಯಾಸ ಕಂಡುಬಂದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಜು. 27 ರಂದು ಹಣವನ್ನು ವರ್ಗಾಯಿಸಲಾಗಿತ್ತು ಆದರೆ ಮೊತ್ತವನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ದಿನದ ಪುಸ್ತಕ ಸಲ್ಲಿಕೆ ವಿಳಂಬವಾಗಿದೆ ಎಂದು ವರದಿ ತಿಳಿಸಿದೆ.
ಘಟನೆ 2 ಕೋಟಿ ರೂ.ಗಳ ಹಗರಣ ಎಂದು ಇದೀಗ ತಿಳಿಯಲಾಗಿದೆ. ಆದರೆ ಈ ರೀತಿ ಇನ್ನಷ್ಟು ಹಣವನ್ನು ವಂಚಿಸಲಾಗಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.