ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ಗಡಿ ದಾಟಿದೆ. ನಿನ್ನೆಯವರೆಗೆ ಒಟ್ಟು 2 ಕೋಟಿಯ 27 ಲಕ್ಷದ 24 ಸಾವಿರದ 134 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು ನಿನ್ನೆ ಒಂದೇ ದಿನ 5 ಲಕ್ಷದ 74 ಸಾವಿರದ 783 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಭಾರತದಲ್ಲಿ ನಿನ್ನೆ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ಗಡಿ ದಾಟಿದ್ದು, ಗುಣಮುಖ ಹೊಂದಿದವರ ಸಂಖ್ಯೆ 13 ಲಕ್ಷದ 70 ಸಾವಿರ ಮಂದಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 11 ಸಾವಿರದ 514, ಪಶ್ಚಿಮ ಬಂಗಾಳದಲ್ಲಿ 2 ಸಾವಿರದ 954, ಪಂಜಾಬ್ ನಲ್ಲಿ ಸಾವಿರದ 49, ದೆಹಲಿಯಲ್ಲಿ ಸಾವಿರದ 299 ಹೊಸ ಕೇಸುಗಳು ದಾಖಲಾಗಿದ್ದವು. ಉತ್ತರ ಪ್ರದೇಶದಲ್ಲಿ 4 ಸಾವಿರದ 658 ಹೊಸ ಕೇಸುಗಳು ದಾಖಲಾಗಿವೆ.
ದಕ್ಷಿಣ ಭಾರತದಲ್ಲಿ ತಮಿಳು ನಾಡಿನಲ್ಲಿ 5 ಸಾವಿರದ 684 ಕೇಸುಗಳು ಮತ್ತು 110 ಸಾವು ಸಂಭವಿಸಿವೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಕ್ರಮವಾಗಿ 10 ಸಾವಿರ ಮತ್ತು 6,500 ಕೇಸುಗಳು ದಾಖಲಾಗಿವೆ.
ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಹೊರಡಿಸಿರುವ ಅಂಕಿಅಂಶದಿಂದ ಕಂಡುಬಂದಿರುವ ಸಮಾಧಾನದ ಸಂಗತಿಯೆಂದರೆ ದೇಶದಲ್ಲಿ ಗುಣಮುಖ ಹೊಂದುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ಶೇಕಡಾ 67.62ರಷ್ಟು ಗುಣಮುಖ ಹೊಂದಿದವರ ಸಂಖ್ಯೆಯಿದ್ದು ಮೃತರ ಸಂಖ್ಯೆ ಶೇಕಡಾ 2.07ಕ್ಕೆ ಇಳಿದಿದೆ.