ನವದೆಹಲಿ: ಭಾರತ ತಂಡಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಅಪ್ರತಿಮ ನಾಯಕ ಎಂಎಸ್ ಧೋನಿ, ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡ ಕ್ಯಾಪ್ಟನ್ ಕೂಲ್, ನಿವೃತ್ತಿ ವಿಚಾರವನ್ನು ಶನಿವಾರ ಬಹಿರಂಗ ಪಡಿಸಿದ್ದರು.
ಕಳೆದ ವರ್ಷ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿತ್ತು. ಆ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಗುರಿ ಮುಟ್ಟಿಸುವ ಕಡೆಗೆ ಹೊರಟಿದ್ದ ಎಂಎಸ್‌ಡಿ ದುರದೃಷ್ಟಕರ ರೀತಿಯಲ್ಲಿ ರನ್‌ಔಟ್ ಆಗಿದ್ದರು. ಅದೇ ಕೊನೆ ಭಾರತ ತಂಡದಲ್ಲಿ ಎಂಎಸ್ ಮರಳಿ ಕಾಣಿಸಿಕೊಳ್ಳಲಿಲ್ಲ.
ಧೋನಿ ನಿವೃತ್ತಿ ಬಳಿಕ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಸಬ್ರಮಣಿಯನ್ ಸ್ವಾಮಿ ಕೂಡ ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದು, ಜೊತೆಗೆ ಮಾಜಿ ನಾಯಕ ರಾಜಕೀಯ ಪ್ರವೇಶ ಮಾಡುವಂತೆ ಸಲಹೆಯನ್ನೂ ನೀಡಿದ್ದಾರೆ.
ಎಂಎಸ್ ಧೋನಿ ಕೇವಲ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ ಅಷ್ಟೆ. ಕಷ್ಟಗಳ ವಿರುದ್ಧ ಹೋರಾಡುವ ಅವರ ಪ್ರತಿಭೆ ಮತ್ತು ಅವರಲ್ಲಿನ ನಾಯಕತ್ವದಿಂದ ಭಾರತ ತಂಡ ಸಾಧನೆಯ ಮೆಟ್ಟಿಲೇರಿದ್ದು, ಇದೇ ನಾಯಕತ್ವದ ಅಗತ್ಯ ನಮ್ಮ ಜನಸಾಮಾನ್ಯರಿಗೂ ಇದೆ. ಅವರು 2024 ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಬೇಕು ಎಂದು ಸ್ವಾಮಿ ತಮ್ಮ ಟ್ವೀಟ್ ಮೂಲಕ ಮುಕ್ತ ಸಲಹೆ ನೀಡಿದ್ದಾರೆ.