ಕಾಸರಗೋಡು: ಕೋವಿಡ್ ಸೋಂಕಿನ ಪರಿಣಾಮ ಶುಕ್ರವಾರ ಇನ್ನೂ ಎರಡು ಸಾವುಗಳು ವರದಿಯಾಗಿದೆ. ಚಿಕಿತ್ಸೆಯಲ್ಲಿರುವಾಗ ಮೃತಪಟ್ಟ ಮೀಂಜ ಮತ್ತು ಉದುಮಾ ಪಂಚಾಯತಿ ವ್ಯಾಪ್ತಿಯ ಇಬ್ಬರ ಸಾವು ಕೋವಿಡ್ ನಿಂದ ಎಂದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 21 ಕ್ಕೆ ಏರಿದೆ.
ಮೀಂಜ ಕೋಳ್ಯೂರು ಹೌಸ್ ನ ಇಬ್ರಾಹಿಂ ಅವರ ಪತ್ನಿ ಮರಿಯಮ್ಮ (75) ಗುರುವಾರ ರಾತ್ರಿ ನಿಧನರಾದರು. ಅವರು ಪರಿಯಾರಂನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಹೃದ್ರೋಗ ಮತ್ತು ತೀವ್ರ ಶ್ವಾಸಕೋಶದ ಕಾಯಿಲೆ ಇತ್ತು. ಕೋವಿಡ್ ಬಾಧಿಸಿರುವುದು ಮಂಗಳವಾರ ದೃಢಪಡಿಸಲಾಗಿತ್ತು.
ಪತಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೋವಿಡ್ ನಿಯಮಾನುಸಾರ ಮೃತದೇಹದ ಅಂತ್ಯಸಂಸ್ಕಾರ ಕೋಳ್ಯೂರು ಜುಮಾ ಮಸೀದಿಯಲ್ಲಿ ನೆರವೇರಿತು.
ಜೊತೆಗೆ ಬೇಕಲ ಸಮೀಪದ ತ್ರಿಕ್ಕನ್ನಾಡ್ ಹೋಟೆಲ್‍ನ ಮೀನುಗಾರ ಬಿ ರಮೇಶನ್ (47) ನ್ಯುಮೋನಿಯಾದಿಂದ ಸಾವನ್ನಪ್ಪಿದ್ದು ಅವರಿಗೂ ಕೋವಿಡ್ ದೃಢಪಟ್ಟಿದೆ. ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ ರಮೇಶನ್ ಗುರುವಾರ ಬೆಳಿಗ್ಗೆ ನಿಧನರಾದರು. ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಇರುವುದನ್ನು ದೃಢಪಡಿಸಲಾಯಿತು.
ಬಿ.ರಮೇಶ್ ಅವರು ಪಾಲಕ್ಕಾಡ್‍ನ ಖಾಸಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ಸೋಮವಾರ ಕೋಟ್ಟಿಕುಳಂನಲ್ಲಿ ನಡೆಸಿದ ಸಾರ್ವಜನಿಕ ಗಂಟಲ ದ್ರವ ಪರೀಕ್ಷೆಯಲ್ಲಿ ಫಲಿತಾಂಶವು ಋಣಾತ್ಮಕವಾಗಿತ್ತು. ತೀವ್ರ ಜ್ವರ , ಉಸಿರಾಟದ ತೊಂದರೆಗಳಿಂದ ಬಳಲಿದ್ದ ರಮೇಶ್ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬುಧವಾರ ದಾಖಲಿಸಲಾಗಿತ್ತು. ಪರಿಸ್ಥಿತಿ ಹದಗೆಡುತ್ತಿದ್ದಂತೆ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಗುರುವಾರ ಮುಂಜಾನೆ 3 ಗಂಟೆಗೆ ಅವರು ಮೃತಪಟ್ಟರು. ಮೃತದೇಹವನ್ನು ಮನೆಗೆ ತರಲಾಗಿಲ್ಲ ಆದರೆ ಕೋವಿಡ್ ನಿಯಮಾನುಸಾರ ರಾತ್ರಿ ಮಲಂಕುನ್ನು ಸಮುದಾಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಅವರ ಸಹೋದರ ಕೋವಿಡ್ ಬಾಧಿಸಿದ್ದು ಚಿಕಿತ್ಸೆಗೊಳಗಾಗಿದ್ದಾರೆ.