ನವದೆಹಲಿ: 12 ಕ್ಲಸ್ಟರ್ ಗಳಲ್ಲಿ ಖಾಸಗಿ ರೈಲುಗಳ ಸಂಚಾರಕ್ಕೆ 23 ಕಂಪನಿಗಳು ಆಸಕ್ತಿ ತೋರಿವೆ.
ಖಾಸಗಿ ರೈಲುಗಳನ್ನು ಪರಿಚಯಿಸುವ ಸಂಬಂಧ ನಡೆದ ಬಿಡ್ಡಿಂಗ್ ಪೂರ್ವ ಸಭೆಯಲ್ಲಿ ಮೇಧಾ, ಸ್ಟೆರ್ಲೈಟ್ ಪವರ್, ಭಾರತ್ ಪೋರ್ಜ್, ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಬಿಹೆಚ್ಇಎಲ್, ALSTOM ಟ್ರಾನ್ಸ್ಪೋರ್ಟ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದವು.
ರೈಲ್ವೆ ಮಂಡಳಿ ಅಧಿಕಾರಿಗಳು, ನೀತಿ ಆಯೋಗದ ಅಧಿಕಾರಿಗಳಿದ್ದ ಈ ಸಭೆಯಲ್ಲಿ ಖಾಸಗಿ ಕಂಪನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಾಗಿದ್ದು ಮುಂದಿನ ಹಂತದ ಸಭೆಯನ್ನು ಸೆಪ್ಟೆಂಬರ್ 8 ಕ್ಕೆ ಮುಂದೂಡಲಾಗಿದೆ.
ರೈಲ್ವೆ ಸಚಿವಾಲಯ ರಿಕ್ವೆಸ್ಟ್ ಫಾರ್ ಕ್ವಾಲಿಫಿಕೇಶನ್ (ಆರ್ ಎಫ್ ಕ್ಯೂ)ಗಳನ್ನು ಖಾಸಗಿ ಕಂಪನಿಗಳಿಂದ ಕೇಳಿತ್ತು. 109 ಮುಖ್ಯ ಮಾರ್ಗಗಳಲ್ಲಿ 151 ಆಧುನಿಕ ರೈಲುಗಳನ್ನು ಪರಿಚಯಿಸುವ ಮೂಲಕ ರೈಲ್ವೆಯಲ್ಲಿ ಖಾಸಗಿ ಕಂಪನಿಗಳ ರೈಲುಗಳನ್ನು ಸಂಚರಿಸುವಂತೆ ಮಾಡಲಾಗುತ್ತದೆ.
ಇದನ್ನು ರೈಲ್ವೆಯಲ್ಲಿನ ಮೊದಲ ಖಾಸಗಿ ಹೂಡಿಕೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಸುಮಾರು 30,000 ಕೋಟಿ ರೂಪಾಯಿ ಹೂಡಿಕೆಯ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮಾರ್ಚ್. 2023 ರ ವೇಳೆಗೆ ಮೊದಲ ಖಾಸಗಿ ರೈಲು ಕಾರ್ಯನಿರ್ವಹಣೆ ಮಾಡಲಿದೆ.