ಮಂಜೇಶ್ವರ: ವಿವಿಧ ರೀತಿಯ ಕಾರುಣ್ಯ ಚಟುವಟಿಕೆಗಳ ಮೂಲಕ ನೊಂದವರ ಕಣ್ಣೀರೊರೆಸುತ್ತಿರುವ ಮಂಜೇಶ್ವರ "ಸ್ನೇಹಾಲಯ" ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ಸೇವಾ ತುರಾಯಿಗೆ ಮತ್ತೊಂದು ಚಿನ್ನದ ಗರಿ ಪೋಣಿಸಲ್ಪಟ್ಟಿದೆ.
ವಿವಿಧ ರೀತಿಯಲ್ಲಿ ಒಡಕು ಹಣೆಯವರ ಕಣ್ಣೀರೊರೆಸುತ್ತಿರುವ ಸ್ನೇಹಾಲಯವು ಇದೀಗ ಮನೆದಾನಕ್ಕೂ ಕಾಲಿರಿಸಿದೆ. ಕಡು ಬಡವರಾದ ಕಾಸರಗೋಡು ಜಿಲ್ಲೆಯ ಕನ್ಯಪ್ಪಾಡಿ ಸಮೀಪ ತಲ್ಪನಾಜೆ ನಿವಾಸಿಯಾಗಿರುವ ಜಾಕಿಮ್ ಡಿ" ಸೋಜಾ ಅವರ ಕುಟುಂಬಕ್ಕೆ "ಸ್ನೇಹಾಲಯ"ದ ನೇತೃತ್ವದಲ್ಲಿ ಕುವೈಟ್ ಉದ್ಯಮಿಯಾದ ದಾನಿಯೊಬ್ಬರ ನೆರವು ಹಾಗೂ ಊರವರ ಸಹಕಾರದೊಂದಿಗೆ ವಾಸಯೋಗ್ಯ ಮನೆಯನ್ನು ಪುನರ್ನಿರ್ಮಿಸಿ ನೀಡಲಾಯಿತು. ಕೋವಿಡ್ ನೀತಿ ಸಂಹಿತೆಯನ್ನು ಪಾಲಿಸಿ ಇತ್ತೀಚೆಗೆ ನಡೆದ ಸರಳ ಸುಂದರ ಸಮಾರಂಭದಲ್ಲಿ ಮನೆ ಹಸ್ತಾಂತರ ಮಾಡಲಾಯಿತು.
ಕಾಞಂಗಾಡ್ ಚೆರುಪನತ್ತಡಿ ಎಂ.ಎಸ್.ಜೆ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಜೀವಾ ಅವರು ಜಾಕಿಮ್ ಕುಟುಂಬಕ್ಕೆ ಮನೆಯ ಕೀಲಿ ಕೈ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೇಳ ಶೋಕಮಾತಾ ಧರ್ಮಕ್ಷೇತ್ರದ ಧರ್ಮಗುರು ಫಾದರ್ ಜಾನ್‍ವಾಸ್ ಅವರು ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿದರು. ಅವರು ಮಾತನಾಡಿ, ವಿವಿಧ ರೀತಿಯಲ್ಲಿ ನರಳುವವರನ್ನು ಅರಳಿಸುವ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ನೇಹಾಲಯದ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನೊಂದವರ ಕಣ್ಣೀರನ್ನೊರೆಸುವಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸ್ನೇಹಾಲಯದ ಮುಖ್ಯಸ್ಥ ಬ್ರದರ್ ಜೋಸೆಫ್ ಕ್ರಾಸ್ತಾ ಹಾಗೂ ಅವರ ತಂಡದವರ ಸೇವೆ ಅನುಕರಣೀಯ ಮತ್ತು ಮಾದರಿಯಾದುದಾಗಿದೆ. ಮಾನವ ಸೇವೆಯೇ ಮಾಧವ ಸೇವೆಯೆಂಬ ಮಾತು ಇಲ್ಲಿ ಸಾಕಾರವಾಗಿದೆ. ಇಂಥಾ ಪುಣ್ಯ ಕಾರ್ಯಗಳಿಂದ ಅನೇಕ ಮಂದಿ ಇಂದು ಬದುಕಿನ ಮುಖ್ಯವಾಹಿನಿಗೆ ಬರುತ್ತಿರುವುದು ಆಶಾದಾಯಕವೆಂದರು. ನೂತನ ಭವನದಲ್ಲಿ ವಾಸ ಆರಂಭಿಸಿದ ಜಾಕಿಮ್ ಡಿ"ಸೋಜಾ ಕುಟುಂಬವನ್ನು ಅವರು ಹರಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ ಲೇಖಕ, ಪತ್ರಕರ್ತ, ದೃಶ್ಯ ಮಾಧ್ಯಮ ಕಾರ್ಯಕ್ರಮ ನಿರೂಪಕ ರವಿ ನಾಯ್ಕಾಪು ಅವರು ಮಾತನಾಡಿ, ದೀಪ ಮಾತನಾಡುವುದಿಲ್ಲ. ಅದರ ಬೆಳಕು ದೀಪದ ಪರಿಚಯ ನೀಡುತ್ತದೆ. ಅದೇ ರೀತಿ ಜೋಸೆಫ್ ಕ್ರಾಸ್ತಾ ಎಂಬ ಸ್ನೇಹಾಲಯ ರೂವಾರಿಯಾಗಿರುವ ಈ ವ್ಯಕ್ತಿ ತನ್ನ ಬಗ್ಗೆ ಏನೂ ಹೇಳುವುದಿಲ್ಲ. ನಿರಂತರವಾಗಿ ಅವರು ಕೈಗೊಳ್ಳುವ ಸತ್ಕಾರ್ಯಗಳೇ ಅವರನ್ನು ಪರಿಚಯಿಸುತ್ತದೆ ಎಂದರು. ಕಳೆದ 11 ವರ್ಷಗಳಿಂದ ಸ್ನೇಹಾಲಯ ನಡೆಸುತ್ತಿರುವ ಕಾರುಣ್ಯ ಚಟುವಟಿಕೆಗಳು ಸಾಟಿಯಲ್ಲದಂತವು. ಅಲ್ಲಿ ಕೋಟಿ ಪುಣ್ಯಗಳ ಹೂಮಳೆ ವರ್ಷಿಸುತ್ತಿದೆ. ಜೋಸೆಫ್ ಕ್ರಾಸ್ತಾರಂಥ ಇನ್ನಷ್ಟು ಮಂದಿ ಇರುತ್ತಿದ್ದಲ್ಲಿ ಈ ನಾಡು ಮತ್ತಷ್ಟು ಸ್ವಾಸ್ಥ್ಯ ಹಾಗೂ ಸುಂದರವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಕೀ ಹಸ್ತಾಂತರಿಸಿದ ಸಿಸ್ಟರ್ ಜೀವಾ ಅವರು ಮಾತನಾಡಿ, ನಾನು ನಿನ್ನನ್ನು ಪ್ರೀತಿಸಿದಂತೆಯೇ ನೀನು ಇತರರನ್ನು ಪ್ರೀತಿಸು ಎಂಬ ಪ್ರಭು ಯೇಶುವಿನ ಬೋಧನೆಯನ್ನು ತನ್ನ ಬದುಕಿನಲ್ಲಿ ಅಕ್ಷರಶ: ಪಾಲಿಸಿರುವ ಜೋಸೆಫ್ ಕ್ರಾಸ್ತಾ ಹಾಗೂ ಸಂಗಡಿಗರ ಮಾನವೀಯ ಸ್ಪಂದನೆಯಿಂದಾಗಿ ಇಂದು ನೂರಾರು ಕುಟುಂಬಗಳು ಸಂತೃಪ್ತವಾಗಿ ಬದುಕುವಂತಾಗಿದೆ. "ಸ್ನೇಹಾಲಯ"ದ ಕಾರುಣ್ಯ ಧಾರೆಯಲ್ಲಿ ಮನೆದಾನವು ಒಂದು ಪುಟ್ಟಸೇವೆ ಅಥವಾ ಕಿರುಕಾರ್ಯ ಮಾತ್ರ. ಸ್ನೇಹಾಲಯದ ನೈಜಸೇವೆಯು ನಿಜಕ್ಕೂ ಅದ್ಭುತ ಹಾಗೂ ಅನನ್ಯವಾದುದು. ಇದು ಸಾಮಾನ್ಯರಿಂದ ಸಾಧಿಸುವ ಮಾತೇ ಅಲ್ಲ. ಅಲ್ಪ ಕೊಳಕಾಗಿರುವ ವ್ಯಕ್ತಿಯು ಸನಿಹ ಕುಳಿತುಕೊಂಡ ಮಾತ್ರಕ್ಕೆ "ಛೀ" ಅನ್ನುವ ನಮ್ಮಂಥವರು ಜೋಸೆಫ್ ಕ್ರಾಸ್ತಾರಿಂದ ಕಲಿಯಬೇಕಾಗಿರುವುದು ಅನೇಕವಿದೆ. ಮನೋವಿಕಲರಾಗಿ ರಸ್ತೆ ಬದಿಯಲ್ಲಿ ಬಿದ್ದು ಜಿಗುಟುಕಟ್ಟಿ, ಮೈ ಕೊಳೆತು ಹುಳಗಳು ಸೃಷ್ಟಿಯಾದ ಮಂದಿಯನ್ನು ಬಾಚಿ ತಬ್ಬಿಕೊಂಡು ಸ್ನಾನಮಾಡಿಸಿ ಬಟ್ಟೆಬರೆ ತೊಡಿಸಿ ವಸತಿ ಕಲ್ಪಿಸಿ ಅವರ ಜೊತೆಗೆ ಉಂಡಾಡಿ ಅವರನ್ನು ಲಾಲಿಸಿ ಪಾಲಿಸುವ ರೀತಿಯು ನಿಜಕ್ಕೂ ದೇವ ಸಮಾನವೆಂದರು.
ಜೋಸೆಫ್ ಕ್ರಾಸ್ತಾ ಅವರು ಮಾತನಾಡಿ, ಮನೆ ಪುನರ್ನಿರ್ಮಾಣ ಕಾರ್ಯ ಹಾಗೂ ಸ್ನೇಹಾಲಯದ ಚಟುವಟಿಕೆಗಳಲ್ಲಿ ಸಹಕರಿಸುತ್ತಿರುವ ಸಕಲರಿಗೂ ಹೃದ್ಯವಾಗಿ ಕೃತಜ್ಞತೆ ಸಲ್ಲಿಸಿದರು. ಸ್ನೇಹಾಲಯ ಸಲಹಾ ಸಮಿತಿಯ ಮುಖ್ಯಸ್ಥ ಜಿಯೋ ಡಿ"ಸಿಲ್ವಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ನೇಹಾಲಯದ 11 ವರ್ಷಗಳ ಸೇವಾಧಾರೆಯ ಬಗ್ಗೆ ಮಾಹಿತಿ ನೀಡಿದರು. ಮನೆ ಕೊಡಲ್ಪಟ್ಟ ಜಾಕಿಮ್ ಡಿ"ಸೋಜಾ ಅವರ ಪುತ್ರಿ, ಎಂಟನೇ ತರಗತಿ ವಿದ್ಯಾರ್ಥಿನಿ ಜೆನಿತಾಳು ತಮಗೆ ಸುಂದರ ಭವನವನ್ನು ಸಾಕಾರಗೊಳಿಸಿದ ಜೋಸೆಫ್ ಕ್ರಾಸ್ತಾ, ಮನೆದಾನಿ ಹಾಗೂ ನೆರವಾದ ಸಕಲರಿಗೂ ಮಾರ್ಮಿಕ ಮಾತುಗಳಿಂದ ಕೃತಜ್ಞತೆ ಸಲ್ಲಿಸಿದಳು. ಸ್ನೇಹಾಲಯ ಕಾಸರಗೋಡು ಘಟಕದ ಸಂಚಾಲಕ ರಾಜು ಸ್ಟೀಫನ್ ಅವರು ವಂದಿಸಿದರು. ಹಿರಿಯ ನ್ಯಾಯವಾದಿ, ಸಮಾಜ ಸೇವಕ ಎಂ.ಎಸ್.ಥೋಮಸ್ ಡಿ"ಸೋಜಾ, ಕುವೈಟ್‍ನ ಉದ್ಯಮಿ ಮನೆದಾನಿಯ ಪ್ರತಿನಿಧಿ ನವೀನ್ ಫೆರಾವೋ, ಸಾಮಾಜಿಕ ಕಾರ್ಯಕರ್ತ ನವೀನ್ ಡಿ" ಸೋಜಾ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದ ಬಳಿಕ ಮನೆಯ ಆವರಣದಲ್ಲಿ ಸ್ನೇಹಾಲಯ ಟ್ರಸ್ಟಿಗಳಾದ ಒಲಿವಿಯಾ ಕ್ರಾಸ್ತಾ ಹಾಗೂ ಥೋಮಸ್ ಡಿ"ಸೋಜಾ ಅವರು ಸೇರಿ ಫಲ ವೃಕ್ಷದ ಸಸಿಯೊಂದನ್ನು ನೆಟ್ಟರು.
ಸ್ನೇಹಾಲಯದ ನಾಲ್ಕನೇ ಮನೆದಾನ ಇದಾಗಿದ್ದು, ನಿರ್ವಸಿತರಿಗೆ ವಸತಿಯನ್ನೊದಗಿಸುವ ಕಾರ್ಯವನ್ನು ಮುಂದುವರಿಸುವುದಾಗಿ ಸ್ನೇಹಾಲಯ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.