ನವದೆಹಲಿ: ಭಾರತದೊಂದಿಗೆ ಗಡಿ ಸಂಘರ್ಷಕ್ಕಿಳಿದ ಚೀನಾಗೆ ಮೇಲಿಂದ ಮೇಲೆ ಭರ್ಜರಿ ಪೆಟ್ಟು ಬೀಳುತ್ತಿದೆ. ಈ ಸಾಲಿಗೆ 'ರಾಖಿ' ವ್ಯಾಪಾರವೂ ಸೇರ್ಪಡೆಯಾಗಿದೆ.
ಪ್ರತಿ ಸಾಲಿನಲ್ಲಿ ರಾಖಿ ಹಬ್ಬದ ದಿನದಂದು ಚೀನಾದಿಂದ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ 2020 ನೇ ಸಾಲಿನ ರಾಖಿ ಹಬ್ಬಕ್ಕೆ ಮೇಡ್ ಇನ್ ಇಂಡಿಯಾ ರಾಖಿಗಳು ಬಂದಿದ್ದು, ಚೀನಾಗೆ 4,000 ರೂಪಾಯಿ ನಷ್ಟ ಉಂಟಾಗಿದೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಯಶಸ್ವಿಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಮೂಲಕ ಸುಳ್ಳುಗೊಂಡಿದೆ.ಜೂ.10 ರಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ರಾಖಿ ಹಬ್ಬವನ್ನು ಹಿಂದೂಸ್ಥಾನಿ ರಾಖಿ ಎಂದು ಆಚರಣೆ ಮಾಡಬೇಕೆಂದು ಕರೆ ನೀಡಿತ್ತು. ಇದಕ್ಕೆ ನಿರೀಕ್ಷಿತ ಬೆಂಬಲ ದೊರೆತಿದ್ದು ದೇಶಿಯ ರಾಖಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಸಿಎಐಟಿ ಸಹಕಾರದಿಂದ ದೇಶಾದ್ಯಂತ ಭಾರತೀಯ ಸರಕುಗಳನ್ನು ಉಪಯೋಗಿಸಿ, ಅಂಗನವಾಡಿ, ಮನೆಗಳಲ್ಲಿರುವ ಮಹಿಳೆಯರು 1 ಕೋಟಿ ರಾಖಿಗಳನ್ನು ತಯಾರಿಸಿದ್ದಾರೆ.ಈ ಮೂಲಕ ಒಂದೇ ಒಂದು ರಾಖಿಯನ್ನೂ ಚೀನಾದಿಂದ ಈ ಬಾರಿ ಆಮದು ಮಾಡಿಕೊಳ್ಳಲಾಗಿಲ್ಲ. ಪ್ರತಿ ವರ್ಷ 6,000 ಕೋಟಿ ರೂಪಾಯಿ ಮೌಲ್ಯದ 50 ಕೋಟಿ ರಾಖಿಗಳು ಮಾರಾಟವಾಗುತ್ತಿತ್ತು. ಈ ಪೈಕಿ 4000 ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಹೇಳಿದ್ದಾರೆ.