ಕಾಸರಗೋಡು: ಹೋಮಿಯೋಪತಿ ಇಮ್ಯೂನಿಟಿ ಬೂಸ್ಟರ್ ಔಷಧಗಳ ವಿತರಣೆ ಪ್ರಕ್ರಿಯೆ ಕಾಸರಗೋಡು ಜಿಲ್ಲೆಯಲ್ಲಿ ಪ್ರಗತಿ ಸಾಧಿಸುತ್ತಿದೆ. ಈಗಾಗಲೇ ಶೇ 41 ಮಂದಿಗೆ ಮೊದಲ ಡೋಸ್ ಔಷಧ ವಿತರಿಸಲಾಗಿದೆ.
ಕೋವಿಡ್ 19 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ವಿವಿಧ ಚಿಕಿತ್ಸಾ ವಿಜ್ಞಾನಗಳ ಸಾಧ್ಯತೆಯನ್ನು ಸದುಪಯೋಗ ಪಡಿಸಿ, ರೋಗ ಪ್ರತಿರೋಧ ಶಕ್ತಿ ಹೆಚ್ಚಳ ನಡೆಸುವ ನಿಟ್ಟಿನಲ್ಲಿ ಈ ಔಷಧ ವಿತರಣೆ ನಡೆಸಲಾಗುತ್ತಿದೆ.
ಕಾಸರಗೋಡು ಜಿಲ್ಲೆಯ ತುರ್ತು ಪರಿಸ್ಥಿತಿ ಪರಿಶೀಲಿಸಿ ಕೇಂದ್ರ ಆಯುಷ್ ಮಂತ್ರಾಲಯದ ಆದೇಶ ಪ್ರಕಾರ ಹೋಮಿಯೋಪತಿ ಇಮ್ಯೂ ನ್ ಬೂಸ್ಟ ರ್ ಔಷಧವಾಗಿರುವ ಎ.ಆರ್.ಎಸ್.ಎ.ಎಲ್.ಬಿ.30 ರ ಮೊದಲ ಡೋಸ್ ವಿತರಣೆ ನಡೆಸಲಾಗುತ್ತಿದೆ. ಆ.6 ವರೆಗೆ ಜಿಲ್ಲೆಯ 5,34,684 (ಶೇ 41) ಮಂದಿಗೆ, ಎರಡನೇ ಡೋಸ್ 1,25,031(ಶೇ 9) ಮಂದಿಗೆ, ಮೂರನೇ ಡೋಸ್ 6,830 ಮಂದಿಗೆ ವಿತರಣೆ ನಡೆಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಹೋಮಿಯೋ) ಡಾ.ಕೆ.ರಾಮಸುಬ್ರಹ್ಮಣ್ಯಂ ತಿಳಿಸಿದರು.
ಅನೇಕ ವಿದೇಶಗಳಲ್ಲಿ, ಭರದ ವಿವಿಧ ರಾಜ್ಯಗಳಲ್ಲಿ ಕೊರೋನಾ ವಿರುದ್ಧ ನಡೆಯುತ್ತಿರುವ ಪ್ರತಿರೋಧ ಚಟುವಟಿಕೆಗಳು ಯಶಸ್ಸು ಕಾಣುವಲ್ಲಿ ಹೋಮಿಯೋ ಔಷಧಗಳ ಕೊಡುಗೆಯೂ ಸಣ್ಣದಲ್ಲ. ಕಾಸರಗೋಡು ಜಿಲ್ಲೆಯಲ್ಲೂ ಇದು ಫಲಕಾರಿಯಾಗಿದೆ ಎಂದವರು ತಿಳಿಸಿದರು.
ಇತ್ತೀಚೆಗಿನ ದಿನಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಕೋವಿಡ್ ಸೋಂಕು ಅಧಿಕ ಗೊಳ್ಳುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಮಾಸ್ಕ್, ಗ್ಲೌಸ್ ಧರಿಸುವುದು, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದುದು ಅನಿವಾರ್ಯ. ಹೋಮಿಯೋ ಇಮ್ಯೂನ್ ಬೂಸ್ಟರ್ ಔಷಧ ಎ.ಆರ್.ಎಸ್.ಎ.ಎಲ್.ಬಿ.30 ಸೇವಿಸುವ ಮೂಲಕ ಸಾರ್ವಜನಿಕರು ಜೀವ, ಆರೋಗ್ಯ ಸಂರಕ್ಷಿಸಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಔಷಧಕ್ಕಾಗಿ ಸಾರ್ವಜನಿಕರು ಡಿಸ್ಪೆನ್ಸರಿಗೆ ಆಗಮಿಸಿ ಗುಂಪುಗೂಡಿದರೆ, ಕೋವಿಡ್ ಪ್ರತಿರೋಧ ಸಂಹಿತೆ ಉಲ್ಲಂಘನೆ ನಡೆಯುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರ ಮೊದಲಾದವರ ಮೂಲಕ ಮನೆಗಳಿಗೇ ಈ ಔಷಧ ವಿತರಣೆ ನಡೆಸುವ ಸಂಬಂಧ ಸ್ಥಳೀಯಾಡಳಿತ ಸಂಸ್ಥೆ ಗಳ ಪದಾಧಿಕಾರಿಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ(ಹೋಮಿಯೋ) ವಿನಂತಿಸಿರುವರು.