ನವದೆಹಲಿ: ಕೊರೊನಾವೈರಸ್ ಸೋಂಕಿನಿಂದಾಗಿ ತೀವ್ರ ಅನಾರೋಗ್ಯ ಪೀಡಿತ ರೋಗಿಗಳ ಚಿಕಿತ್ಸೆಗೆ ಬಳಸಲು 60,000 ವೆಂಟಿಲೇಟರ್‍ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶಿಸಿದ್ದು, ಈ ಪೈಕಿ 50,000 ವೆಂಟಿಲೇಟರ್‍ಗಳನ್ನು ಪಿಎಂ ಕೇರ್ಸ್ ನಿಧಿ ಮೂಲಕ ಖರೀದಿಸಲಾಗಿದೆ.
ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಎಂ ಕೇರ್ಸ್ ನಿಧಿಯಿಂದ ಸುಮಾರು 2,000 ಕೋಟಿ ರೂ.ವೆಚ್ಚದಲ್ಲಿ 50,000 ವೆಂಟಿಲೇಟರ್‍ಗಳನ್ನು ಖರೀದಿಸಲಾಗಿದೆ. ಆರೋಗ್ಯ ಸಚಿವಾಲಯವು ನಿಧಿಯ ಮೂಲಕ ಖರೀದಿಸಿದ ವೆಂಟಿಲೇಟರ್‍ಗಳು ಜಿಪಿಎಸ್ ಚಿಪ್‍ಗಳನ್ನು ಹೊಂದಿವೆ.
ಈ 60,000 ವೆಂಟಿಲೇಟರ್‍ಗಳ ಪೈಕಿ 18,000 ವೆಂಟಿಲೇಟರ್‍ಗಳನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲಾಗಿದೆ. ಒಟ್ಟು 60,000 ವೆಂಟಿಲೇಟರ್‍ಗಳ ಪೈಕಿ ಶೇ 96 ರಷ್ಟು 'ಮೇಕ್ ಇನ್ ಇಂಡಿಯಾ' ವೆಂಟಿಲೇಟರ್‍ಗಳಾಗಿವೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಈ ವೆಂಟಿಲೇಟರ್‍ಗಳಲ್ಲಿ ಹಾಗೂ ಆರೋಗ್ಯ ಇಲಾಖೆಗಳ ಬಜೆಟ್ ನಿಂದ ಖರಿದಿಸಲಾಗುತ್ತಿರುವ ವೆಂಟಿಲೇಟರ್‍ಗಳಲ್ಲಿ ಜಿಪಿಎಸ್ ಚಿಪ್‍ಗಳನ್ನು ಹುದುಗಿಸಿವೆ, ಆದ್ದರಿಂದ ಅವುಗಳನ್ನು ಟ್ರ್ಯಾಕ್ ಮಾಡಬಹುದು, ಎಂದು ಇಲಾಖೆಯ ಕಾರ್ಯದರ್ಶಿ ಮಾದ್ಯಮಗಳಿಗೆ ತಿಳಿಸಿದ್ದಾರೆ.