ಕಾಸರಗೋಡು: ಕೇರಳದ ಎಲ್ಲ 14 ಜಿಲ್ಲೆಗಳಲ್ಲೂ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಲಭಿಸಿದೆ. ಅದರಂತೆ ಕಾಸರಗೋಡು ಜಿಲ್ಲೆಯಲ್ಲಿ ಆಗಸ್ಟ್ 3 ರಿಂದ 6ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ತೀವ್ರ ಮಳೆಗೆ ಭೂಕುಸಿತ, ಮಣ್ಣು ಕುಸಿತ ಮತ್ತು ಪ್ರವಾಹದ ಸಾಧ್ಯತೆ ಇದ್ದು , ಇದರನ್ವಯ ಜಿಲ್ಲೆಯಲ್ಲಿ ಆಗಸ್ಟ್ 3 ರಿಂದ 6ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಕೇರಳದಲ್ಲಿ ಆಗಸ್ಟ್ 3 ಸೋಮವಾರದಿಂದ ಬಿರುಸಿನ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೋಮವಾರ ಮತ್ತು ಮಂಗಳವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಆಗಸ್ಟ್ 4 ರ ಹೊತ್ತಿಗೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗುತ್ತದೆ. ಆದ್ದರಿಂದ ಸೋಮವಾರ ಮತ್ತು ಮಂಗಳವಾರ ಕೇರಳ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು , ನಂತರದ ಕೆಲವು ದಿನಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.