ತಿರುವನಂತಪುರ: ಓಣಂ ಕಿಟ್ ನೊಂದಿಗೆ ಸರಬರಾಜು ಮಾಡಲಾದ ಬೆಲ್ಲದ ಕಳಪೆ ಗುಣಮಟ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಗುಣಮಟ್ಟ ಪರೀಕ್ಷಾ ಫಲಿತಾಂಶಗಳು ಹೊರಬರುವ ಮೊದಲು ವಿತರಿಸಿದ ಕಿಟ್‍ಗಳನ್ನು ಖರೀದಿಸಿದ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.
ಗುಣಮಟ್ಟವಿಲ್ಲದ ಸಕ್ಕರೆ ಪತ್ತೆಯಾದ ಬಳಿಕ ಸಕ್ಕರೆಗೆ ಬದಲಾಗಿ ಬೆಲ್ಲವನ್ನು ವಿತರಿಸಲು ಸೂಚಿಸಲಾಗಿತ್ತು. ಆದರೆ ಬೆಲ್ಲವೂ ಕಳಪೆ ಗುಣಮಟ್ಟದಲ್ಲಿರುವುದು ಇದೀಗ ಖಾತ್ರಿಯಾಗಿ ಜನಾಕ್ರೋಶಕ್ಕೆ ಕಾರಣವಾಗಿದೆ.
ಓಣಂಗೆ 11 ವಸ್ತುಗಳನ್ನು ಹೊಂದಿರುವ ಕಿಟ್‍ನಲ್ಲಿ ತಲಾ 1 ಕೆಜಿ ಬೆಲ್ಲ ವಿತರಿಸಲಾಗುತ್ತಿದೆ. ಸರಬರಾಜು ಮಾಡಿದ ಬೆಲ್ಲದ ತೂಕ ಮತ್ತು ಗುಣಮಟ್ಟದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಈ ಸನ್ನಿವೇಶದಲ್ಲಿ ಸಪ್ಲೈಕೊ ಬೆಲ್ಲದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತು. ಫಲಿತಾಂಶ ಆಘಾತಕಾರಿಯಾಗಿ ಕಳವಳಕ್ಕೆ ಕಾರಣವಾಗಿದೆ.
ಏಳು ಸಂಸ್ಥೆಗಳ ಪೂರೈಕೆದಾರರು ಒದಗಿಸಿದ 65 ಲಕ್ಷ ಕೆಜಿ ಬೆಲ್ಲ ಉಪಯೋಗಕ್ಕೆ ಅರ್ಹವಲ್ಲ ಎಂದು ಕಂಡುಬಂದಿದೆ. ಕೆಲವು ಕಡಿಮೆ ಮಟ್ಟದ ಸುಕ್ರೋಸ್ ಹೊಂದಿರುವುದು ಕಂಡುಬಂದಿದೆ. ಮತ್ತೆ ಕೆಲವರು ಕೃತಕ ಬಣ್ಣವನ್ನು ಸೇರಿಸಿರುವುಉದ ಪತ್ತೆಯಾಗಿದೆ. ಕೆಲವು ಕಿಟ್ ಗಳಲ್ಲಿ ಕೂದಲು, ಬೀಡಿ ಮೊದಲಾದವುಗಳೂ ಕಂಡುಬಂದಿದೆ. ಆದ್ದರಿಂದ ಉಪಯೋಗ ಶೂನ್ಯವಾಗಿರುವ ಅಂತಹ ವಸ್ತುಗಳನ್ನು ಮರಳಿ ಗ್ರಾಹಕರಿಂದ ಹಿಂಪಡೆಯಬೇಕೆಂದು ಲಿಖಿತವಾಗಿ ಪೂರೈಕೆದಾರರಿಗೆ ಸೂಚಿಸಲಾಗಿದೆ. ಆದಾಗ್ಯೂ, ಪಡಿತರ ಅಂಗಡಿಗಳ ಮೂಲಕ ಲಕ್ಷಾಂತರ ಕಿಟ್‍ಗಳನ್ನು ವಿತರಿಸಿದ ಬಳಿಕವಷ್ಟೇ ಮಾದರಿಗಳ ಪರೀಕ್ಷಾ ಫಲಿತಾಂಶಗಳು ಬಂದಿರುವುದು ಮುಂದೇನು ಎಂಬ ಪ್ರಶ್ನೆಯನ್ನು ಬಾಕಿಯಿರಿಸಿದೆ.