ನವದೆಹಲಿ: ದೇಶದ ಹಿರಿಯ ರಾಜಕಾರಣಿ, ಭಾರತ ರತ್ನ, ಹಿರಿಯ ಮುತ್ಸದ್ದಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ನಿಧನರಾಗಿದ್ದಾರೆ.
ಪ್ರಣಬ್ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ ಮಾಡಿದೆ. ಆಗಸ್ಟ್ 31ರಿಂದ ಸೆ.26ರವರೆಗೆ ರಾಷ್ಟ್ರೀಯ ಶೋಕಾಚರಣೆಗೆ ಆದೇಶ ಹೊರಡಿಸಲಾಗಿದೆ.
ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅವರು ಚಿಕಿತ್ಸೆ ಪಡೆಯತ್ತಿದ್ದಾಗಲೇ ಸೋಮವಾರ ಸಂಜೆ ಗೊಧೋಳಿ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಜತೆಗೆ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಪ್ರಣಬ್ ಮುಖರ್ಜಿ ಮೃತಪಟ್ಟಿದ್ದಾರೆ ಎಂದು ಪ್ರಣಬ್ ಪುತ್ರ ಅಭಿಜಿತ್ ಮುಖರ್ಜಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.
ತಂದೆ ಪ್ರಣಬ್ ಮುಖರ್ಜಿ ಅವರು ನಿಧನರಾಗಿರುವ ಸುದ್ದಿಯನ್ನು ಭಾರದ ಹೃದಯದಿಂದ ಪ್ರಕಟಿಸುತ್ತಿದ್ದೇನೆ. ತಜ್ಞ ವೈದ್ಯರ ತಂಡ ಅವರ ಆರೋಗ್ಯ ಕಾಪಾಡಲು ಹಗಲಿರುಳು ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿತು ಎಂದು ಅಭಿಜಿತ್ ಸ್ಮರಿಸಿದ್ದಾರೆ. ರಾಷ್ಟ್ರಪತಿಯಾಗಿ, ಕೇಂದ್ರ ಸಚಿವರಾಗಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ ಪ್ರಣಬ್ ಭಾರತೀಯ ರಾಜಕೀಯದಲ್ಲಿ ತಮ್ಮದೇ ಛಾಪುಮೂಡಿಸಿದ್ದರು.
ಪ್ರಣಬ್ ಮುಖರ್ಜಿ ಅವರು ಡಿಸೆಂಬರ್ 11, 1935 ರಂದು ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಮಿರಾಠಿ ಗ್ರಾಮದಲ್ಲಿ ಜನಿಸಿದರು. ಎಂ.ಎ (ಇತಿಹಾಸ), ಎಂ.ಎ (ರಾಜಕೀಯ), ಎಲ್‌ಎಲ್‌ಬಿ, ಡಿ.ಲಿಟ್ ಪದವಿ ಪಡೆದ ನಂತರ ಅವರು ಕೆಲ ಕಾಲ ಶಿಕ್ಷಕ ಹಾಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.