ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಕೃಷಿ ಮೂಲಸೌಕರ್ಯ ನಿಧಿ' ಅಡಿಯಲ್ಲಿ ಕೃಷಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಆರ್ಥಿಕ ಸಹಾಯ ಘೋಷಣೆ ಮಾಡಿದ್ದಾರೆ. ತನ್ಮೂಲಕ ದೇಶದ 8.5 ಕೋಟಿ ರೈತರಿಗೆ ಆರನೇ ಕಂತು 17,000 ಕೋಟಿ ರೂ.ಗಳನ್ನು 'ಪಿಎಂ-ಕಿಸಾನ್ ಯೋಜನೆ' ಅಡಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಗ್ರಿಕಲ್ಚರ್ ಇನ್ಫ್ರಾಸ್ಟ್ರಕ್ಚರ್ ಫಂಡ್ ಅಡಿ ಒಂದು ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಒಂದು ಲಕ್ಷ ಕೋಟಿ ರೂ.ಗಳ 'ಕೃಷಿ ಮೂಲಸೌಕರ್ಯ ನಿಧಿ' ಅಡಿಯಲ್ಲಿ ಹಣ ಸೌಲಭ್ಯಕ್ಕಾಗಿ ಕೇಂದ್ರ ವಲಯ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಸಂಸ್ಕರಣಾ ಘಟಕಗಳಂತಹ (Processing Units)ಸುಗ್ಗಿ ನಂತರದ ಬೆಳೆ ನಿರ್ವಹಣಾ ಮೂಲಸೌಕರ್ಯ' ಮತ್ತು 'ಸಮುದಾಯ ಕೃಷಿ ಆಸ್ತಿ'ಗಳ ನಿರ್ಮಾಣಕ್ಕೆ ಈ ನಿಧಿ ವೇಗ ನೀಡಲಿದೆ. ಈ ಸ್ವತ್ತುಗಳ ಮೂಲಕ ರೈತರು ತಮ್ಮ ಬೆಲೆಗೆ ಹೆಚ್ಚಿನ ಮೌಲ್ಯ ಪಡೆಯಬಹುದಾಗಿದೆ.
11 ಸರ್ಕಾರಿ ಬ್ಯಾಂಕ್ ಗಳ ಜೊತೆಗೆ ಒಪ್ಪಂದ
ಇದಕ್ಕಾಗಿ ಕೇಂದ್ರ ಸರ್ಕಾರ ಸಾಲ ನೀಡುವ ಹಲವು ಹಣಕಾಸಿನ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಒಂದು ಲಕ್ಷ ಕೋಟಿ ರೂ. ಸಾಲದ ಯೋಜನೆ ಇಂದು ಆರಂಭಗೊಂಡಿದೆ. ಇದರಲ್ಲಿ ಸಾರ್ವಜನಿಕ ವಲಯದ ಒಟ್ಟು 12 ಬ್ಯಾಂಕ್ ಗಳ ಪೈಕಿ 11 ಬ್ಯಾಂಕ್ ಗಳು ಈ ಮೊದಲೇ ಯೋಜನೆಗಾಗಿ ಕೃಷಿ ಸಹಯೋಗ ಹಾಗೂ ರೈತರ ಕಲ್ಯಾಣ ವಿಭಾಗದ ಜೊತೆಗೆ ಮೆಮೊರೆಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ ಗೆ ಸಹಿ ಹಾಕಿವೆ. ಈ ಯೋಜನೆಯಿಂದ ಅತಿ ಹೆಚ್ಚು ರೈತರಿಗೆ ಸಹಾಯವಾಗಬೇಕು ಹಾಗೂ ಅವರ ಆದಾಯದಲ್ಲಿ ಏರಿಕೆಯಾಗಬೇಕು ಎಂಬ ಉದ್ದೇಶದಿಂದ ಯೋಜನೆಯ ಲಾಭಾರ್ಥಿಗಳಿಗೆ ಶೇ.3 ರಷ್ಟು ಸಬ್ಸಿಡಿ ಹಾಗೂ 2 ಕೋಟಿ ರೂ. ಸಾಲ ಗ್ಯಾರಂಟಿ ನೀಡಲಾಗುತ್ತಿದೆ.