ಭಾರತದ ಭದ್ರತಾ ಸುರಕ್ಷತೆ ದೃಷ್ಟಿಯಿಂದ ಗೇಮಿಂಗ್ ಆ್ಯಪ್ ಬಳಕೆಗೂ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. ಅಗ್ರಸ್ಥಾನದಲ್ಲಿರುವ ಚೀನಾದ ಗೇಮಿಂಗ್ ಆ್ಯಪ್ ಗಳನ್ನು ದೇಶದಲ್ಲಿ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಲವು ಅಪ್ಲಿಕೇಷನ್ ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ. ಇತ್ತೀಚಿನ ಬೆಳವಣಿಗೆಯಂತೆ ಚೀನಾದ ಬೈದು(Baidu) ಸರ್ಚ್ ಹಾಗೂ ವೈಬೊ (Weibo) ಅಪ್ಲಿಕೇಷನ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್ ನಿಂದ ತೆಗೆದು ಹಾಕಲು ಸೂಚಿಸಲಾಗಿದೆ. ಜೂನ್.29ರಂದು ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 69ಎ ಅಡಿಯಲ್ಲಿ ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಯಿತು. ಜುಲೈ 27ರಂದು 47 ಆಪ್ ಮೇಲೆ ನಿರ್ಬಂಧ ಹೇರಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿರ್ಬಂಧ, ನಿಷೇಧ ಹೇರಿಕೆ ಇನ್ನೂ ಮುಂದುವರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟಾರೆ, 275 ಆಪ್ ಗಳ ಮೇಲೆ ನಿಗಾ ಇರಿಸಲಾಗಿದ್ದು, ಈ ಆಪ್ ಗಳಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಪಬ್ಜಿ ಮೊಬೈಲ್ ಗೇಮ್ ಕೂಡಾ ನಿರ್ಬಂಧ ಹೇರಲಿರುವ ಆಪ್ ಪಟ್ಟಿಯಲ್ಲಿದೆ. ಸಿನಾ ಕಾರ್ಪೊರೇಷನ್ ನ ವೈಬೊ 500 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಟ್ವಿಟ್ಟರ್ ಮಾದರಿಯ ಈ ಅಪ್ಲಿಕೇಷನ್ ನಲ್ಲಿ ಪ್ರಧಾನಿ ಮೋದಿ ಕೂಡಾ ತಮ್ಮ ಖಾತೆ ಹೊಂದಿದ್ದರು. 2015ರಲ್ಲಿ ಚೀನಾದ ಮೈಕ್ರೋಬ್ಲಾಗಿಂಗ್ ತಾಣಾವಾಗಿ ಜನಪ್ರಿಯಗೊಂಡಿತು. ಬೈದು ಸರ್ಚ್ ಭಾರತದಲ್ಲಿ ಪೂರ್ಣಪ್ರಮಾಣದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿರಲಿಲ್ಲ, ಆದರೆ, ಐಐಟಿ ಮದ್ರಾಸ್ ಕ್ಯಾಂಪಸಿಗೆ ಬಂದಿದ್ದ ಸಂಸ್ಥೆಯ ಸಿಇಒ ರಾಬಿನ್ ಲಿ ಅವರು ಬೈದು ಸರ್ಚ್ ಬಳಸಿ ದಶಕಗಳ ಹಿಂದೆ ಕಳೆದು ಹೋಗಿದ್ದ ವ್ಯಕ್ತಿಯೊಬ್ಬರನ್ನು ಫೇಸ್ ರೆಕಗ್ನಿಷನ್ ಮುಂತಾದ ತಂತ್ರಜ್ಞಾನದ ಮೂಲಕ ಕಂಡು ಹಿಡಿದ ಸತ್ಯ ಘಟನೆ ವಿವರಿಸಿದಾಗ ಎಲ್ಲರೂ ರೋಮಾಂಚನಗೊಂಡಿದ್ದರು. ಭಾರತದಲ್ಲಿ ಬೈದುಗೆ ಹೊಸ ಹೆಬ್ಬಾಗಿಲು ತೆರೆದಿತ್ತು. ಜೂನ್ 15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು. ಈ ಸಂಘರ್ಷದಿಂದ ಉಭಯ ರಾಷ್ಟ್ರಗಳ ನಡುವ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿಯೇ ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸುವುದಕ್ಕೆ ಕಾರಣವಾಯಿತು.