ಕಾಸರಗೋಡು: ನೀಲೇಶ್ವರ ನಗರಸಭೆಗೆ ಶುಚಿತ್ವ ಪದವಿಯನ್ನು ನೀಡಿ ಹರಿತ ಕೇರಳಂ ಮಿಷನ್ ಘೋಷಣೆ ಮಾಡಿದೆ.
ಶನಿವಾರ ಗೂಗಲ್ ಮೀಟ್ ಮೂಲಕ ಹರಿತ ಕೇರಳಂ ಮಿಷನ್ ರಾಜ್ಯ ಕಾರ್ಯಕಾರಿ ಉಪಾಧ್ಯಕ್ಷೆ ಡಾ.ಟಿ.ಎನ್.ಸೀಮಾ ಈ ಶುಚಿತ್ವ ಪದವಿ ಘೋಷಣೆ ನಡೆಸಿದರು.
"ಹರಿತ ಶುಚಿತ್ವ ನೀಲೇಶ್ವರ" ಎಂಬ ಗುರಿಯೊಂದಿಗೆ ಕಳೆದ ಹತ್ತು ವರ್ಷಗಳಿಂದ ರಾಶಿ ಬಿದ್ದಿದ್ದ ತ್ಯಾಜ್ಯಗಳನ್ನು ಸಂಸ್ಕರಣ ಘಟಕ ಮೂಲಕ ಗೊಬ್ಬರವಾಗಿಸಿದ, ಪ್ಲಾಸ್ಟಿಕ್ ಷ್ರೆಡ್ಡಿಂಗ್, ಯೂನಿಟ್ ಬೈಲಿಂಗ್ ಯೂನಿಟ್ ಇತ್ಯಾದಿಗಳನ್ನು ಆರಂಭಿಸಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನ ನಡೆಸಿ ಕ್ಲೀನ್ ಕೇರಳ ಯೋಜನೆಗೆ ಹಸ್ತಾಂತರಿಸಿದುದು, ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪುಡಿಮಾಡಿ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿದುದು, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಸುರಿದವರಿಗೆ ದಂಡ ಹೇರಿದುದು ಇತ್ಯಾದಿಗಳ ಹಿನ್ನೆಲೆಯಲ್ಲಿ ಈ ಪದವಿ ಪ್ರದಾನ ಮಾಡಲಾಗಿದೆ.
ಗೂಗಲ್ ಮೀಟ್ ಸಮಾರಂಭದಲ್ಲಿ ಮಾತನಾಡಿದ ಡಾ.ಟಿ.ಎನ್.ಸೀಮಾ ಅವರು ನೀಲೇಶ್ವರ ಹರಿತ ಕ್ರಿಯಾ ಸೇನೆ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿ.ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಪಿ.ರಾಧಾ, ಪಿ.ಎಂ.ಸಂಧ್ಯಾ, ಪಿ.ಪಿ.ಮುಹಮ್ಮದ್ ರಾಫಿ, ಸದಸ್ಯರುಗಳು, ಹರಿತ ಕೇರಳಂ ಜಿಲ್ಲಾ ಸಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ತೋಟತ್ತಿಲ್ ಕುಂಞÂ ಕಣ್ಣನ್ ವರದಿ ವಾಚಿಸಿದರು.