ನವದೆಹಲಿ: ಹೊಸ ಶಿಕ್ಷಣ ನೀತಿಯನ್ನು ಜನರ ಆಶೋತ್ತರಗಳ ಅಭಿವ್ಯಕ್ತಿ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ನೀತಿಯು ಜನರ ಮನಸ್ಥಿತಿಯನ್ನು ಬದಲಿಸಲು ಸಹಾಯ ಮಾಡುವುದಲ್ಲದೆ, ಯುವ ಪೀಳಿಗೆಯನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ದೇಶವನ್ನು ಜಾಗತಿಕ ಶೈಕ್ಷಣಿಕ ಕೇಂದ್ರವನ್ನಾಗಿ ಬದಲಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.
ಶನಿವಾರ ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 ರ ಗ್ರ್ಯಾಂಡ್ ಫಿನಾಲೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಶಿಕ್ಷಣ ನೀತಿಯು ಉದ್ಯೋಗಾಕಾಂಕ್ಷಿಗಳಿಗಿಂತ ಮುಖ್ಯವಾಗಿ ಉದ್ಯೋಗ ಸೃಷ್ಟಿಕರ್ತರನ್ನು ರೂಪಿಸುವುದಕ್ಕೆ ಒತ್ತು ನೀಡುತ್ತದೆ. ಒಂದು ರೀತಿಯಲ್ಲಿ ಇದು ನಮ್ಮ ಮನಸ್ಥಿತಿಯಲ್ಲಿ, ನಮ್ಮ ವಿಧಾನದಲ್ಲಿ ಸುಧಾರಣೆಯನ್ನು ತರುವ ಪ್ರಯತ್ನವಾಗಿದೆ ಎಂದು ಹೇಳಿದರು. 21 ನೇ ಶತಮಾನದ ಯುವಕರ ಚಿಂತನೆ, ಅಗತ್ಯಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. 21 ನೇ ಶತಮಾನವು ಜ್ಞಾನದ ಯುಗವಾಗಿದೆ.ಆದ್ದರಿಂದ, ಇದು ಕೇವಲ ನೀತಿ ದಾಖಲೆ ಮಾತ್ರವಲ್ಲದೆ, 130 ಕೋಟಿಗೂ ಹೆಚ್ಚು ಭಾರತೀಯರ ಆಕಾಂಕ್ಷೆಗಳ ಪ್ರತೀಕವಾಗಿದೆ. ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆಗಳತ್ತ ಗಮನವನ್ನು ಕೇಂದ್ರೀಕರಿಸುವ ಸಮಯ ಇದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.