ಕಾಸರಗೋಡು: ಕೋವಿಡ್ 19 ತಪಾಸಣೆ ನಡೆಸುತ್ತಿರುವ ಕೇಂದ್ರಗಳಿಗೆ ಪರೀಕ್ಷೆಗಳಿಗೆ ಆಗಮಿಸುವ ಮಂದಿ ಆರೋಗ್ಯ ಕಾರ್ಯಕರ್ತರ ಪೂರ್ವಾನುಮತಿ ಪಡೆದು ಆ ಮೂಲಕ ನಿಗದಿ ಪಡಿಸಲಾದ ಅವಧಿಯಲ್ಲಿ ಮಾತ್ರ ಬರಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ತಪಾಸಣೆಗೆ ಆಗಮಿಸುವ ಮಂದಿ ಮೂಗು, ಬಾಯಿ ಪೂರ್ಣರೂಪದಲ್ಲಿ ಮುಚ್ಚಿಕೊಳ್ಳುವ ರೀತಿ ಮಾಸ್ಕ್ ಧರಿಸಬೇಕು. ತಪಾಸಣೆ ಕೇಂದ್ರಗಳಲ್ಲಿ ಕನಿಷ್ಠ 2 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಪಾಸಣೆ ಕೇಂದ್ರಗಳಿಗೆ ತಲಪುವ ಮುನ್ನ ಮತ್ತು ಅಲ್ಲಿಂದ ತೆರಳಿದ ಮೇಲೆ ಕೈಗಳನ್ನು ಸಾಬೂನು ಬಳಸಿ ತೊಳೆಯಬೇಕು, ಯಾ ಆಲ್ಕೋಹಾಲ್ ಅಳವಡಗೊಂಡಿರುವ ಸಾನಿಟೈಸರ್ ಬಳಸಿ ಶುಚಿಗೊಳಿಸಬೇಕು. ತಪಾಸಣೆಯ ಫಲಿತಾಂಶ ಅರಿಯುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳನ್ನು ಯಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು. ತಪಾಸಣೆಗೊಳಪಟ್ಟ ಮಂದಿ ನಂತರ ಫಲಿತಾಂಶ ಬರುವ ವರೆಗೆ ಕಡ್ಡಾಯವಾಗಿ ರೂಂ ಕ್ವಾರೆಂಟೈನ್ ಪ್ರವೇಶಿಸಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಮುಖಕ್ಕೆ ಮುಚ್ಚಿಕೊಳ್ಳಬೇಕು. ಮನೆಯಲ್ಲಿರುವ 10 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳನ್ನು, 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರನ್ನು, ಗರ್ಭಿಣಿಯರನ್ನು, ಶಾಶ್ವತ ರೋಗಿಗಳನ್ನು ಯಾವ ಕಾರಣಕ್ಕೂ ಸಂಪರ್ಕಿಸಕೂಡದು. ಫಲಿತಾಂಶ ಲಭಿಸಿದ ನಂತರವೂ ಆರೋಗ್ಯ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವರ ಅನುಮತಿ ಪಡೆದ ಮೇಲಷ್ಟೇ ಮನೆಯಿಂದ ಹೊರಗಿಳಿಯಬೇಕು ಎಂದವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿರುವರು.