ನಾಗಪುರ: ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಹಿರಿಯ ಪೈಲಟ್ ದೀಪಕ್ ಸಾಥೆ ಮೃತಪಟ್ಟಿದ್ದಾರೆ. ಆದರೆ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಅನಿರೀಕ್ಷಿತ ಭೇಟಿ ನೀಡಲು ಯೋಚಿಸಿದ್ದರು.
ಸಾಥೆ ಅವರು ತಮ್ಮ 84 ವರ್ಷದ ತಾಯಿ ಹುಟ್ಟುಹಬ್ಬಕ್ಕೆ ಅನಿರೀಕ್ಷಿತ ಭೇಟಿ ನೀಡಿ ಶುಭಾಶಯ ತಿಳಿಸುವ ಧಾವಂತದಲ್ಲಿದ್ದರು. ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು. ಕಳೆದ ಮಾರ್ಚ್ ನಲ್ಲಿ ತಾಯಿಯನ್ನು ಸಾಥೆ ಅವರು ಭೇಟಿ ಮಾಡಿದ್ದರು. ನಂತರ ಫೋನ್ ನಲ್ಲಿ ಮಾತ್ರ ಸಂಪರ್ಕದಲ್ಲಿದ್ದರು. ಕೊನೆಯದಾಗಿ ಗುರುವಾರ ಫೋನ್ ಮಾಡಿ ಮಾತನಾಡಿದ್ದರು ಎಂದು ಸೋದರಳಿಯ ಡಾ. ಯಶೋಧನ್ ಸಾಥೆ ತಿಳಿಸಿದ್ದಾರೆ.
ಕೇರಳದ ಕೋಳಿಕ್ಕೋಡ್ ನ ವಿಮಾನ ನಿಲ್ದಾಣದ ರನ್‌ವೇ ಯಲ್ಲಿ ಇಳಿಯುತ್ತಿದ್ದಾಗ ಜಾರಿ ಕಣಿವೆಗೆ ಬಿದ್ದು ಇಬ್ಭಾಗವಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ 18 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ವಿಮಾನದ ಹಿರಿಯ ಪೈಲಟ್ ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಥೆ ಹಾಗೂ ಕ್ಯಾಪ್ಟನ್ ಅಖಿಲೇಶ್ ಕುಮಾರ್ ಕೂಡ ಸೇರಿದ್ದಾರೆ.
ವಿಂಗ್ ಕಮಾಂಡರ್ ದೀಪಕ್ ವಿ. ಸಾಥೆ ಭಾರತೀಯ ವಾಯು ಪಡೆಯ ಮಾಜಿ ಫೈಟರ್ ಜೆಟ್ ಪೈಲಟ್ ಆಗಿದ್ದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ್ನು ಚಲಾಯಿಸುವ ಮೊದಲು ಅವರು ಏರ್ ಇಂಡಿಯಾ ವಿಮಾನಗಳನ್ನು ಹಾರಿಸುತ್ತಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡಮಿಯ(ಎನ್‌ಡಿಎ) ಹಳೆ ವಿದ್ಯಾರ್ಥಿಯಾಗಿರುವ ದೀಪಕ್ ಸಾಥೆ ಅವರು ಬೋಯಿಂಗ್ 737 ವಿಮಾನಗಳನ್ನು ಹಾರಿಸುವುದರಲ್ಲಿ ಬಹಳ ಅನುಭವ ಹೊಂದಿದ್ದರು. ಕ್ಯಾಪ್ಟನ್ ದೀಪಕ್ ವಿ. ಸಾಥೆ ಎನ್‌ಡಿಎನ 58ನೇ ಕೋರ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರು ಜೂಲಿಯೆಟ್ ಸ್ಕ್ವಾಡ್ರನ್ ಗೆ ಸೇರಿದವರಾಗಿದ್ದರು ಅಲ್ಲದೆ ಸ್ವರ್ಡ್ ಆಫ್ ಹಾನರ್ ಗೌರವಕ್ಕೂ ಪಾತ್ರರಾಗಿದ್ದರು ಎಂದು ಏರ್ ಮಾರ್ಷಲ್ ಭೂಷಣ್ ಗೋಖಲೆ(ನಿವೃತ್ತ) ಮಾಹಿತಿ ನೀಡಿದ್ದಾರೆ.
ದೀಪಕ್ ಅವರು ಜೂನ್ 1981ರಲ್ಲಿ ಹೈದರಾಬಾದ್‌ನ ವಾಯುಪಡೆಯ ಅಕಾಡಮಿಯಿಂದ ಸ್ವಾರ್ಡ್ ಆಫ್ ಹಾನರ್‌ನಿಂದ ಉತ್ತೀರ್ಣರಾಗಿದ್ದರು. ಅವರು ಅತ್ಯುತ್ತಮ ಸ್ಕ್ವ್ಯಾಷ್ ಆಟಗಾರ ಕೂಡ ಆಗಿದ್ದರು. ದೀಪಕ್ ಅವರು ತುಂಬಾ ವೃತ್ತಿಪರರಾಗಿದ್ದರು ಹಾಗೂ 58 ಎನ್‌ಡಿಎ ಅಧ್ಯಕ್ಷ ಚಿನ್ನದ ಪದಕವನ್ನು ಪಡೆದಿದ್ದರು. ಅವರು ವಾಯುಪಡೆಗೆ ಪರೀಕ್ಷಾ ಪೈಲಟ್ ಆಗಿದ್ದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ವಾಯುಸೇನೆಯಿಂದ ನಿವೃತ್ತಿಯಾದ ಬಳಿಕ ದೀಪಕ್ ಸಾಥೆ ವಾಣಿಜ್ಯ ಪೈಲಟ್ ಆಗಲು ನಿರ್ಧರಿಸಿದ್ದರು. ಅದರಂತೆ ಏರ್ ಇಂಡಿಯಾ ಸಂಸ್ಥೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.